ರಾಜನಾಥ ಸಿಂಗ್, ಜನರಲ್ ನಕಾಟಾನಿ
(ಪಿಟಿಐ ಚಿತ್ರ)
ನವದೆಹಲಿ: ಭಾರತದ ಪ್ರವಾಸದಲ್ಲಿರುವ ಜಪಾನ್‌ನ ರಕ್ಷಣಾ ಸಚಿವ ಜನರಲ್ ನಕಾಟಾನಿ ಅವರನ್ನು ಭೇಟಿಯಾಗಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ಭಯೋತ್ಪಾದನೆ, ಇಂಡೋ-ಫೆಸಿಫಿಕ್‌ನಲ್ಲಿ ಚೀನಾ ಮಿಲಿಟರಿ ನಿಲುವು ಸೇರಿದಂತೆ ದ್ವಿಪಕ್ಷೀಯ ರಕ್ಷಣಾ ಬಾಂಧವ್ಯ ವಿಸ್ತರಿಸುವ ಸಂಬಂಧ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಜಪಾನ್‌ನ ರಕ್ಷಣಾ ಸಚಿವರು ಖಂಡಿಸಿದ್ದು, ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿರುವ ಅವರು, ಭಾರತಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ.
ಭಾರತಕ್ಕೆ ಜಪಾನ್ ನೀಡಿರುವ ಬೆಂಬಲಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
'ಜಪಾನ್ ದೇಶದೊಂದಿಗೆ ಭಾರತವು ವಿಶೇಷ, ಕಾರ್ಯತಂತ್ರದ ಹಾಗೂ ಜಾಗತಿಕ ಪಾಲುದಾರಿಕೆಯನ್ನು ಹೊಂದಿದೆ. ದ್ವಿಪಕ್ಷೀಯ ಮಾತುಕತೆಯಲ್ಲಿ ನಾವು ರಕ್ಷಣಾ ಸಹಕಾರ ಮತ್ತು ಪ್ರಾದೇಶಿಕ ಭದ್ರತೆಯ ಕುರಿತು ಚರ್ಚಿಸಿದ್ದೇವೆ' ಎಂದು ರಾಜನಾಥ ಸಿಂಗ್ ಹೇಳಿದ್ದಾರೆ.
ಭಯೋತ್ಪಾದನೆಯನ್ನು ಉಭಯ ದೇಶಗಳು ಖಂಡಿಸುತ್ತಿವೆ. ಗಡಿಯಾಚೆಗಿನ ಬೆದರಿಕೆಗಳನ್ನು ಎದುರಿಸಲು ವಿಸ್ತೃತ ಸಹಯೋಗ ಹಾಗೂ ಜಂಟಿ ಪ್ರಯತ್ನದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ರಕ್ಷಣಾ ಕೈಗಾರಿಕಾ ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲೂ ಉಭಯ ದೇಶಗಳ ನಾಯಕರ ಮಧ್ಯೆ ಮಾತುಕತೆ ನಡೆದಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.