ನವದೆಹಲಿಯ ಇಂಡಿಯಾ ಗೇಟ್ ಸುತ್ತಮುತ್ತ ಬುಧವಾರ ರಾತ್ರಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಕಂಡುಬಂದ ದೃಶ್ಯ
ಪಿಟಿಐ ಚಿತ್ರ
ನವದೆಹಲಿ: ಸ್ವರಕ್ಷಣೆಯ ತಾಲೀಮು ರಾಷ್ಟ್ರ ರಾಜಧಾನಿ ದೆಹಲಿ ಸಹಿತ 300 ಜಿಲ್ಲೆಗಳಲ್ಲಿ ಬುಧವಾರ ನಡೆಯಿತು. ಸಂಜೆ ನಡೆದ ಬ್ಲಾಕ್‌ಔಟ್‌ನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದರಿಂದ, ಎಲ್ಲೆಡೆ ಕತ್ತಲೆ ಆವರಿಸಿ ಸಂಭವನೀಯ ಅಪಾಯದಿಂದ ರಕ್ಷಣೆ ಪಡೆಯುವ ತಾಲೀಮು ನಡೆಸಲಾಯಿತು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು (ಬುಧವಾರ) ಮುಂಜಾನೆ ನಡೆಸಿದ ಕ್ಷಿಪಣಿ ದಾಳಿಯ ಸಂದರ್ಭದಲ್ಲೇ ದೇಶವ್ಯಾಪಿ ಸ್ವರಕ್ಷಣಾ ತಾಲೀಮು ನಡೆಸಲಾಯಿತು.
ಕರ್ನಾಟಕ, ಹರಿಯಾಣ, ಪಂಜಾಬ್, ಅಸ್ಸಾಂ, ಅರುಣಾಚಲ ಪ್ರದೇಶ, ತೆಲಂಗಾಣ, ರಾಜಸ್ಥಾನ, ಕೇರಳ, ಸಿಕ್ಕಿಂ, ಮಹಾರಾಷ್ಟ್ರ, ದೆಹಲಿ, ಮಣಿಪುರ, ಒಡಿಶಾ, ಮಿಜೋರಾಂ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಾಲೀಮು ನಡೆಯಿತು.
ಅಣ್ವಸ್ತ್ರ ಘಟಕ, ಸೇನಾ ನೆಲೆಗಳು, ತೈಲ ಶುದ್ಧೀಕರಣ ಘಟಕಗಳು, ಅಣೆಕಟ್ಟುಗಳು ಸೇರಿದಂತೆ ವಿವಿಧ ಸೂಕ್ಷ್ಮ ಸ್ಥಳಗಳಲ್ಲಿಯೂ ತಾಲೀಮು ನಡೆಸಲಾಗಿದೆ. ದಾಳಿಯ ಸಂದರ್ಭದಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ತರಬೇತಿ ನೀಡಲಾಯಿತು.
ತಾಲೀಮಿನ ವೇಳೆ ವಾಯುದಾಳಿಯ ಮುನ್ನೆಚ್ಚರಿಕೆ ನೀಡುವ ಸೈರನ್‌ಗಳನ್ನು ಮೊಳಗಿಸಲಾಯಿತು. ಅಗ್ನಿ ಅವಘಡ ಸಂಭವಿಸಿದಾಗ ಏನು ಮಾಡಬೇಕು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೇಗೆ ಹೊರತೆಗೆಯಬೇಕು, ಬಹುಅಂತಸ್ಥಿನ ಕಟ್ಟಡದ ಮಧ್ಯೆ ಸಿಲುಕಿರುವವರ ರಕ್ಷಣೆ ಹೇಗೆ ಕೈಗೊಳ್ಳಬೇಕು, ವೈದ್ಯಕೀಯ ತುರ್ತಿನ ವೇಳೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸೈರನ್ ಮೊಳಗಿದವು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಆಂಬುಲೆನ್ಸ್ ಸಹಿತ ವೈದ್ಯರ ತಂಡ ಭೇಟಿ ನೀಡಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರಲ್ಲಿ ಪಾಲ್ಗೊಂಡರು.
ಸಂಜೆ 15 ನಿಮಿಷಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಲ್ಯುಟೆನ್ಸ್ ಸಹಿತ ದೆಹಲಿಯ ಹಲವು ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿದವು. ಸಂಸತ್ ಭವನ, ಇಂಡಿಯಾ ಗೇಟ್, ರಾಯಭಾರ ಕಚೇರಿ ಸಹಿತ ಹಲವು ಪ್ರದೇಶಗಳಲ್ಲಿ ರಾತ್ರಿ 8ಕ್ಕೆ ವಿದ್ಯುತ್ ಕಡಿತ ಮಾಡಲಾಯಿತು. ನಂತರ 8.15ಕ್ಕೆ ಸಂಪರ್ಕ ನೀಡಲಾಯಿತು.
ಇದೇ ಮಾದರಿಯ ಬ್ಲಾಕ್‌ಔಟ್ ತಾಲೀಮು ದೇಶದ ಹಲವೆಡೆ ಏಕಕಾಲಕ್ಕೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.