ನವದೆಹಲಿ: 26 ಜನರು ಮೃತಪಟ್ಟ ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ನೇತೃತ್ವದಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಮತ್ತು ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಪೊಲೀಸ್ ವರಿಷ್ಠಾಧಿಕಾರಿಯನ್ನೊಳಗೊಂಡ ತಂಡ ರಚಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ನಡೆದ ದಾಳಿಯ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಲಿವೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗೆ ಕಾರಣವಾದ ಘಟನೆಗಳ ಅನುಕ್ರಮವನ್ನು ಒಟ್ಟುಗೂಡಿಸಲು ಪ್ರತ್ಯಕ್ಷದರ್ಶಿಗಳನ್ನು ಸೂಕ್ಷ್ಮವಾಗಿ ಪ್ರಶ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದಕರ ಕಾರ್ಯಾಚರಣೆಯ ವಿಧಾನದ ಸುಳಿವುಗಳಿಗಾಗಿ ತನಿಖಾ ಎನ್‌ಐಎ ತಂಡಗಳು ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶವನ್ನು ಬೆಚ್ಚಿಬೀಳಿಸಿದ ಭೀಕರ ದಾಳಿಗೆ ಕಾರಣವಾದ ಭಯೋತ್ಪಾದಕ ಪಿತೂರಿಯನ್ನು ಬಹಿರಂಗಪಡಿಸಲು ವಿಧಿವಿಜ್ಞಾನ ಮತ್ತು ಇತರ ತಜ್ಞರ ಸಹಾಯದಿಂದ ತಂಡಗಳು ಸಾಕ್ಷ್ಯಕ್ಕಾಗಿ ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಬುಧವಾರದಿಂದ ಭಯೋತ್ಪಾದಕ ದಾಳಿ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಎನ್‌ಐಎ ತಂಡಗಳು ಸಾಕ್ಷಿಗಳಿಗಾಗಿ ಹುಡುಕಾಟವನ್ನು ತೀವ್ರಗೊಳಿಸಿವೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಆದೇಶದ ನಂತರ ಭಯೋತ್ಪಾದನಾ ನಿಗ್ರಹ ಸಂಸ್ಥೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣವನ್ನು ವಹಿಸಿಕೊಂಡಿದೆ.
ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನ ಮೇಲ್ಭಾಗದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್‌ನಲ್ಲಿ ಮಂಗಳವಾರ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದರು, ಅವರಲ್ಲಿ ಹೆಚ್ಚಿನವರು ಇತರ ರಾಜ್ಯಗಳಿಂದ ಬಂದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.