ADVERTISEMENT

ಮಹಿಳೆಯರ ಸಿಂಧೂರ ಅಳಿಸಿರುವಾಗ ‘ಆಪರೇಷನ್ ಸಿಂಧೂರ’ ಹೆಸರಿಟ್ಟಿದ್ದೇಕೆ: ಜಯಾ ಬಚ್ಚನ್

ಪಿಟಿಐ
Published 31 ಜುಲೈ 2025, 4:50 IST
Last Updated 31 ಜುಲೈ 2025, 4:50 IST
<div class="paragraphs"><p>ಜಯಾ&nbsp;ಬಚ್ಚನ್‌</p></div>

ಜಯಾ ಬಚ್ಚನ್‌

   

ಪಿಟಿಐ ಚಿತ್ರ

ನವದೆಹಲಿ: ಪಹಲ್ಗಾಮ್‌ ದಾಳಿಯಲ್ಲಿ ಕೆಲ ಮಹಿಳೆಯರು ವಿಧವೆಯರಾದರು, ತಮ್ಮ ಸಿಂಧೂರವನ್ನು ಕಳೆದುಕೊಂಡರು. ಹೀಗಿದ್ದೂ, ಪ್ರತೀಕಾರಕ್ಕಾಗಿ ಭಾರತ ಕೈಗೊಂಡ ಕಾರ್ಯಾಚರಣೆಗೆ ‘ಆಪರೇಷನ್‌ ಸಿಂಧೂರ’ ಎಂದು ಹೆಸರಿಟ್ಟಿದ್ದೇಕೆ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ ಪ್ರಶ್ನಿಸಿದ್ದಾರೆ.

ADVERTISEMENT

ರಾಜ್ಯಸಭೆಯಲ್ಲಿ ಪಹಲ್ಗಾಮ್‌ ದಾಳಿ ಮತ್ತು ಆಪರೇಷನ್‌ ಸಿಂಧೂರ ಕುರಿತ ಚರ್ಚೆಯ‌ಲ್ಲಿ ಭಾಗಿಯಾದ ಅವರು, ‘ನಾನು ನನ್ನ ಹೃದಯದಿಂದ ಮಾತನಾಡುತ್ತೇನೆ, ನೀವು ದೊಡ್ಡ ಬರಹಗಾರರನ್ನು ನೇಮಿಸಿದ್ದೀರಿ, ಅವರು ಅಲಂಕಾರಿಕ ಹೆಸರುಗಳನ್ನು ನೀಡುತ್ತಾರೆ. ಕಾರ್ಯಾಚರಣೆಗೆ ಸಿಂಧೂರ ಎಂದು ಏಕೆ ಹೆಸರಿಟ್ಟಿದ್ದೀರಿ, ದಾಳಿಯಲ್ಲಿ ಮಹಿಳೆಯರು ತಮ್ಮ ಸಿಂಧೂರವನ್ನು ಕಳೆದುಕೊಂಡಿದ್ದಾರೆ’ ಎಂದು ಕಿಡಿಕಾರಿದರು.

ಇದೇ ವೇಳೆ, ಇತರ ಸಂಸದರು ಅಡ್ಡಿಪಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಯಾ, ಪಕ್ಕದಲ್ಲೇ ಕುಳಿತ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರಿಗೆ ‘ನೀವು ನನ್ನನ್ನು ನಿಯಂತ್ರಿಸಿಬೇಡಿ’ ಎಂದು ಕೆಂಡವಾದರು. ಜಯಾ ಅವರ ವರ್ತನೆ ನೋಡಿ ಸಭಾಪತಿಯವರು, ಇತರರ ಬಗ್ಗೆ ಗಮನ ಹರಿಸದಂತೆ ಸಲಹೆ ನೀಡಿದರು.

ಪಹಲ್ಗಾಮ್‌ಗೆ ಹೋದ ಪ್ರವಾಸಿಗರು 370ನೇ ವಿಧಿಯ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಬಳಿಕ ಭಯೋತ್ಪಾದನೆ ಕೊನೆಗೊಳ್ಳುತ್ತದೆ ಎಂಬ ನಂಬಿಕೆಯಿಂದ ಹೋದರು ಆದರೆ ಅಲ್ಲಿ ಏನಾಯಿತು. ಜನರಲ್ಲಿ ಮೂಡಿಸಿದ ಭರವಸೆಯನ್ನು ನೀವು ನಾಶಪಡಿಸಿದ್ದೀರಿ. ಆ ಕುಟುಂಬಗಳು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಆ ಕುಟುಂಬಗಳಿಗೆ ಕ್ಷಮೆಯಾಚಿಸುವ ಸಾಮರ್ಥ್ಯ ನಿಮ್ಮಲ್ಲಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

‘ಅಧಿಕಾರದಲ್ಲಿದ್ದಾಗ ಮಾನವೀಯತೆ ಬಹಳ ಮುಖ್ಯ. ರಕ್ಷಣಾ ಸಚಿವರು ನಾವು ಸ್ವಾವಲಂಬಿಗಳು, ನಾವು ಇದನ್ನು, ಅದನ್ನು ತಯಾರಿಸುತ್ತಿದ್ದೇವೆ ಎಂದು ಹೇಳಿದರು, ನೀವು 25-26 ಜನರನ್ನು ಉಳಿಸಲು ಸಾಧ್ಯವಾಗದಿದ್ದಾಗ ಅದರರ್ಥ ಏನು? ಬಾಂಬ್‌ಗಳು ಸಹಾಯ ಮಾಡುವುದಿಲ್ಲ, ಮಾನವೀಯತೆ ಅಗತ್ಯವಿದೆ. ಯಾವುದೇ ವಿವಾದವನ್ನು ಹಿಂಸೆಯಿಂದ ಶಾಂತಗೊಳಿಸಲು ಸಾಧ್ಯವಿಲ್ಲ. ವಿನಮ್ರತೆ ಕೊರತೆಯಿರುವ ಇಲಾಖೆ ರಕ್ಷಣಾ ಇಲಾಖೆ ಎಂದು ಹೇಳಲು ಬೇಸರವಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.