ADVERTISEMENT

Pahalgam Terror Attack | ಕಂದಕ ಸೃಷ್ಟಿಸುವ ಯತ್ನವೇ? ಮತ್ತೆ ಆತಂಕ

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಗುರಿಯಾಗಿಸಿ ಉಗ್ರರ ದಾಳಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 0:30 IST
Last Updated 24 ಏಪ್ರಿಲ್ 2025, 0:30 IST
-
-   

ಶ್ರೀನಗರ/ಪುಣೆ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಸುಂದರವಾದ ನಿಸರ್ಗದ ಮಡಿಲಿನಲ್ಲಿ ಪ್ರವಾಸಿಗರು ಖುಷಿ ಕ್ಷಣಗಳನ್ನು ಅನುಭವಿಸುತ್ತಿದ್ದ ವೇಳೆ ಉಗ್ರರು ನಡೆಸಿದ ಭೀಕರ ದಾಳಿಯಿಂದಾಗಿ ಮಂಗಳವಾರ ಇಡೀ ಸ್ಥಳದ ಚಿತ್ರಣವೇ ಬದಲಾಗಿ ಹೋಗಿತ್ತು.

ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಈ ದಾಳಿಯಿಂದ, ಸಂತಸ ಮಾಯವಾಗಿ ಭಯವೇ ಮನೆ ಮಾಡಿತ್ತು. ಕಣಿವೆಯ ಜನರ ಮನದಲ್ಲಿ ಕಂದಕ ಸೃಷ್ಟಿಸುವ ಉದ್ದೇಶಪೂರ್ವಕ ಕೃತ್ಯವೇ ಇದು ಎಂಬ ಆತಂಕಭರಿತ ಪ್ರಶ್ನೆಗಳಿಗೂ ಈ ದಾಳಿ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲಷ್ಕರ್‌–ಎ–ತಯಬಾ ಜತೆ ನಂಟು ಹೊಂದಿದೆ ಎನ್ನಲಾದ ‘ದಿ ರೆಸಿಸ್ಟನ್ಸ್‌ ಫ್ರಂಟ್‌’(ಟಿಆರ್‌ಎಫ್‌) ಸಂಘಟನೆಗೆ ಸೇರಿದ 5–6 ಉಗ್ರರು ಏಪ್ರಿಲ್ 22ರಂದು ಮಧ್ಯಾಹ್ನ 2.45ರ ಸುಮಾರಿಗೆ ಭೀಕರ ದಾಳಿ ನಡೆಸಿದ್ದಾರೆ.

ADVERTISEMENT

ಕೆಲ ಪ್ರತ್ಯಕ್ಷದರ್ಶಿಗಳು ಈ ಕ್ರೌರ್ಯದ ಭಯಾನಕ ವಿಧಾನವನ್ನು ವಿವರಿಸಿರುವುದು ಜನರನ್ನು ವಿಭಜಿಸುವ ಹುನ್ನಾರ ಕುರಿತ ಪ್ರಶ್ನೆಗಳನ್ನು ಮತ್ತೆ ಹುಟ್ಟು ಹಾಕಿದೆ.

ಪುಣೆಯ ಅಸಾವರಿ ಜಗದಾಳೆ,‘ಪ್ರವಾಸಿಗರ ಪೈಕಿ ಪುರುಷರನ್ನೇ ಗುರಿಯಾಗಿಸಿ ಹಂತಕರು ಗುಂಡು ಹಾರಿಸಿದರು. ಗುಂಡು ಹಾರಿಸುವ ಮೊದಲು ಪ್ರತಿಯೊಬ್ಬ ಪ್ರವಾಸಿಗನ ಧರ್ಮ ಕುರಿತು ಕೇಳಿದ್ದರು’ ಎಂದು ಹೇಳಿದ್ದಾರೆ.

ಅಸಾವರಿ ಅವರ ತಂದೆ ಸಂತೋಷ್ ಜಗದಾಳೆ, ಸೋದರ ಸಂಬಂಧಿ ಕೌಸ್ತುಭ ಗಣಬೋಟೆ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅಸಾವರಿ ಅವರು ಪುಣೆಯ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾರೆ.

‘ನನ್ನ ಕುಟುಂಬದವರೂ ಸೇರಿ ಹಲವರು ಹತ್ತಿರ ಟೆಂಟ್‌ನಲ್ಲಿ ಅಡಗಿದ್ದೆವು. ಅಲ್ಲಿಗೆ ಬಂದ ಉಗ್ರರು, ‘ಚೌಧರಿ ತು ಬಾಹರ್‌ ಆಜಾ’ ಎಂದು ನನ್ನ ತಂದೆಗೆ ಹೇಳಿದರಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತೀರಿ ಎಂಬುದಾಗಿ ನಮ್ಮನ್ನು ದೂಷಿಸಿದರು’ ಎಂದು ಅಸಾವರಿ ವಿವರಿಸಿದ್ದಾರೆ.

‘ನಾವು ಚಿಕ್ಕಮಕ್ಕಳು ಅಥವಾ ಮಹಿಳೆಯರಿಗೆ ಏನೂ ಮಾಡುವುದಿಲ್ಲ ಎಂಬುದಾಗಿಯೂ ಹೇಳಿದ ಅವರು, ಇಸ್ಲಾಂನ ಸಾಲುಗಳನ್ನು ಪಠಿಸಲು ತಂದೆಗೆ ಸೂಚಿಸಿದರು. ಅವುಗಳನ್ನು ಹೇಳದಿದ್ದಾಗ, ತಂದೆಯ ತಲೆಗೆ ಒಂದು, ಕಿವಿಯ ಹಿಂದೆ ಒಂದು ಹಾಗೂ ಬೆನ್ನಿಗೆ ಒಂದು ಗುಂಡು ಹಾರಿಸಿ, ಹತ್ಯೆ ಮಾಡಿದರು’ ಎಂದು ಅಸಾವರಿ ವಿವರಿಸಿದ್ದಾರೆ.

‘ಘಟನಾ ಸ್ಥಳದಲ್ಲಿ ನಮಗೆ ಸಹಾಯ ಮಾಡಲು ಯಾರೂ ಇರಲಿಲ್ಲ. ಪೊಲೀಸರು ಹಾಗೂ ಯೋಧರು 20 ನಿಮಿಷಗಳ ನಂತರ ಬಂದು ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಸ್ಥಳೀಯರು ಕೂಡ ಆ ವೇಳ ಇಸ್ಲಾಮಿಕ್‌ ಸಾಲುಗಳನ್ನು ಹೇಳುತ್ತಿದ್ದರು’ ಎಂದೂ ವಿವರಿಸಿದ್ದಾರೆ.

ಈ ದಾಳಿಯಲ್ಲಿ ಹತರಾಗಿರುವ ಕರ್ನಾಟಕದ ಶಿವಮೊಗ್ಗದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಅವರು ಸಹ ಭೀಭತ್ಸ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

‘ನನ್ನನ್ನೂ ಕೊಂದು ಬಿಡಿ ಎಂದು ನಾನು ಕಿರುಚಿದೆ. ಆಗ, ಉಗ್ರರ ಪೈಕಿ ಒಬ್ಬಾತ, ‘ಮೋದಿ ಕೊ ಬತಾವೊ(ಹೋಗಿ ಮೋದಿಗೆ ಹೇಳು)’ ಎಂದ. ಆ ದುಃಖ–ಸಂಕಟದ ಕ್ಷಣಗಳನ್ನು ನಾನು ಹೆಚ್ಚು ವಿವರಿಸಲಾರೆ’ ಎಂದು ಪಲ್ಲವಿ ಕಣ್ಣೀರಾದರು.

ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್‌ ಆಗಿರುವ ಭರತ್ ಭೂಷಣ್ ಅವರನ್ನು ಕೂಡ ಪತ್ನಿ ಹಾಗೂ ಅವರ ಮೂರು ವರ್ಷದ ಮಗನ ಮುಂದೆಯೇ ಹತ್ಯೆ ಮಾಡಲಾಗಿದೆ.

ಮೃತಪಟ್ಟವರಲ್ಲಿ ಯುಎಇ ಮತ್ತು ನೇಪಾಳ ಪ್ರಜೆ ಹಾಗೂ ಇಬ್ಬರು ಸ್ಥಳೀಯರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.