ಭದ್ರತಾ ಪಡೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಎಂದು ಕರೆದೊಯ್ದಿದ್ದ ಆರೋಪಿ ಶವವಾಗಿ ಪತ್ತೆಯಾಗಿದ್ದು, ವಿರೋಧ ಪಕ್ಷಗಳು ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿವೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈ ಬಗ್ಗೆ ತನಿಖೆ ಆರಂಭಿಸಿರುವ ಭದ್ರತಾ ಪಡೆಗಳು ಭಯೋತ್ಪಾದಕರ ಅಡಗುತಾಣಗಳನ್ನು ಪತ್ತೆಹಚ್ಚಲು ಶಂಕಿತ ವ್ಯಕ್ತಿಯನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿ ಇಮ್ತಿಯಾಜ್ ಅಹ್ಮದ್ ಮ್ಯಾಗ್ರೆ ಹೊಳೆಗೆ ಹಾರಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದೆ ಎಂದು ಮ್ಯಾಗ್ರೆ ತಪ್ಪೊಪ್ಪಿಕೊಂಡಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾಗ್ರೆ ಅವರ ಮೃತದೇಹವು ನದಿಯಲ್ಲಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಯುವಕನೊಬ್ಬ ಹರಿಯುವ ಹೊಳೆಗೆ ಹಾರಿ ಕೊಚ್ಚಿ ಹೋಗುತ್ತಿರುವ ಡ್ರೋನ್ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ನಡುವೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ಲೋಕಸಭಾ ಸದಸ್ಯ ಅಗಾ ರುಹುಲ್ಲಾ ಮೆಹದಿ ಮತ್ತು ಜಮ್ಮು ಮತ್ತು ಕಾಶ್ಮೀರ ಸಚಿವೆ ಸಕಿನಾ ಇಟ್ಟೂ ಅವರು ಈ ಘಟನೆಯಲ್ಲಿ ಯಾವುದೋ ಘಾತುಕತನ ನಡೆದಂತಿದೆ. ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಿ, ಮೃತ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದ್ದಾರೆ.
'ಪಹಲ್ಗಾಮ್ ದಾಳಿ ತುಂಬಾ ದುಃಖಕರ ಮತ್ತು ದುರದೃಷ್ಟಕರ. ನಾವೆಲ್ಲರೂ ಇದರಿಂದ ನೊಂದಿದ್ದೇವೆ. ಭಯದ ವಾತಾವರಣ ಸೃಷ್ಟಿಯಾಗಿದ್ದು, ಅಮಾಯಕ ಜನರಿಗೆ ಕಿರುಕುಳ ಮತ್ತು ಹಾನಿಯಾಗದಂತೆ ನೋಡಿಕೊಳ್ಳಲು ಗೃಹ ಇಲಾಖೆಗೆ ಸೂಚನೆಗಳನ್ನು ನೀಡಬೇಕೆಂದು ಲೆಫ್ಟಿನೆಂಟ್ ಗವರ್ನರ್ ಅವರನ್ನು ವಿನಂತಿಸುತ್ತೇನೆ' ಎಂದು ಇಟ್ಟೂ ಹೇಳಿದ್ದಾರೆ.
ವರದಿಗಳ ಪ್ರಕಾರ, ಮ್ಯಾಗ್ರೆ ಅವರನ್ನು ಕೆಲವು ದಿನಗಳ ಹಿಂದೆ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದವು, ಆದರೆ ಅವರನ್ನು ಮೃತದೇಹವಾಗಿ ಅವರ ಕುಟುಂಬಕ್ಕೆ ಹಿಂತಿರುಗಿಸಲಾಗಿದೆ ಎಂದು ಸಂಸದ ರುಹುಲ್ಲಾ ಮೆಹದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.