ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ನಿವಾಸದಲ್ಲಿ ಬುಧವಾರ ನಡೆದ ಸಭೆಯನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು. ರಾಜನಾಥ ಸಿಂಗ್, ಅಮಿತ್ ಶಾ ಇದ್ದಾರೆ.
ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಪಾಕಿಸ್ತಾನದ ಜೊತೆಗಿನ ಸಂಬಂಧ ಕಡಿದುಕೊಂಡಿದೆ. ಈ ಸಂಬಂಧ ಪ್ರಮುಖ ಐದು ನಿರ್ಣಯಗಳನ್ನು ತೆಗೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವದೆಹಲಿಯಲ್ಲಿ ಬುಧವಾರ ಸಂಜೆ ನಡೆದ ‘ಭದ್ರತೆ ಕುರಿತ ಸಚಿವ ಸಂಪುಟ’ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಗಡಿಯಾಚೆಗಿನ ನಂಟು ಇದೆ ಎಂಬುದು ಈ ತೀರ್ಮಾನಕ್ಕೆ ಕಾರಣ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಾಕಿಸ್ತಾನ ವಿರುದ್ಧ ಭಾರತ ತೆಗೆದುಕೊಂಡು ಪ್ರಮುಖ ಐದು ನಿರ್ಣಯಗಳು...
1. ಸಿಂಧೂ ಜಲ ಒಪ್ಪಂದ ಅಮಾನತು
2. ವಾಘಾ–ಅಟ್ಟಾರಿ ಗಡಿ ಬಂದ್
3. ಸಾರ್ಕ್ ವೀಸಾ ರದ್ದು
4. ಪಾಕಿಸ್ತಾನದಲ್ಲಿನ ಭಾರತದ ದೂತಾವಾಸ ಕಚೇರಿಗಳಲ್ಲಿನ ಸಿಬ್ಬಂದಿ ಸಂಖ್ಯೆ ಕಡಿತ
5. ಭಾರತದಲ್ಲಿ ಇರುವ ಪಾಕಿಸ್ತಾನದ ದೂತಾವಾಸ ಕಚೇರಿಗಳಲ್ಲಿನ ಮಿಲಿಟರಿ ರಾಜತಾಂತ್ರಿಕರಿಗೆ ಭಾರತದಿಂದ ಹೊರನಡೆಯಲು ಸೂಚನೆ
ಸಿಂಧೂ ಜಲ ಒಪ್ಪಂದ ಅಮಾನತು: 1960ರಲ್ಲಿ ಮಾಡಿಕೊಂಡ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತಿನಲ್ಲಿ ಇರಿಸಲಾಗಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ವಿಶ್ವಾಸ ಮೂಡಿಸುವ ಬಗೆಯಲ್ಲಿ ಹಾಗೂ ಶಾಶ್ವತವಾಗಿ ನಿಲ್ಲಿಸುವವರೆಗೆ ಈ ತೀರ್ಮಾನ ಜಾರಿಯಲ್ಲಿ ಇರುತ್ತದೆ. ಇದರ ಪರಿಣಾಮ ರಾವಿ, ಬಿಯಾಸ್, ಸಟ್ಲೇಜ್, ಇಂಡಸ್, ಝೇಲಂ, ಚೀನಾಬ್ ನದಿಗಳ ನೀರು ಪಾಕ್‌ಗೆ ಹರಿಯುವುದು ನಿಲ್ಲುತ್ತದೆ. ಇದರಿಂದಾಗಿ ಪಾಕ್‌ನಲ್ಲಿ ನೀರಿನ ಹಾಹಾಕಾರ, ಬೆಳೆಗಳು ಒಣಗಬಹುದು, ಆಹಾರದ ಅಭಾವ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.
ವಾಘಾ–ಅಟ್ಟಾರಿ ಗಡಿ ಬಂದ್: ಅಟ್ಟಾರಿ ಗಡಿಯಲ್ಲಿ ಇರುವ ಚೆಕ್‌ಪೋಸ್ಟ್ ಅನ್ನು (ತಪಾಸಣಾ ಠಾಣೆ) ತಕ್ಷಣದಿಂದಲೇ ಮುಚ್ಚಲಾಗಿದೆ. ಈ ಮಾರ್ಗದ ಮೂಲಕ ಗಡಿ ದಾಟಿದವರು ಮೇ 1ಕ್ಕೆ ಮೊದಲು ವಾಪಸ್ಸಾಗಬೇಕು.
ಸಾರ್ಕ್ ವೀಸಾ ರದ್ದು: ಸಾರ್ಕ್ ವೀಸಾ ವಿನಾಯಿತಿ ಯೋಜನೆ ಅಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಭೇಟಿ ನೀಡಲು ಇದ್ದ ಅವಕಾಶವನ್ನು ರದ್ದು ಮಾಡಲಾಗಿದೆ. ಈ ವೀಸಾ ಯೋಜನೆ ಅಡಿಯಲ್ಲಿ ಭಾರತಕ್ಕೆ ಬಂದವರು ಮುಂದಿನ 48 ಗಂಟೆಯಲ್ಲಿ ಭಾರತ ತೊರೆಯಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಭಾರತದಲ್ಲಿರುವ ಪಾಕ್ ದೂತಾವಾಸ ಕಚೇರಿಗಳಲ್ಲಿನ ಮಿಲಿಟರಿ ರಾಜತಾಂತ್ರಿಕರಿಗೆ ಭಾರತದಿಂದ ಹೊರನಡೆಯಲು ಸೂಚನೆ: ನವದೆಹಲಿಯಲ್ಲಿ ಇರುವ ಪಾಕಿಸ್ತಾನದ ದೂತಾವಾಸ ಕಚೇರಿಗಳಲ್ಲಿ ಕರ್ತವ್ಯದಲ್ಲಿರುವ ಮಿಲಿಟರಿ, ರಕ್ಷಣೆ, ನೌಕಾಸೇನೆ ಮತ್ತು ವಾಯುಸೇನೆಯ ಸಲಹೆಗಾರರನ್ನು ಭಾರತದಿಂದ ಹೊರಕ್ಕೆ ಕಳುಹಿಸಲಾಗುತ್ತದೆ ಎಂದರು. ಅವರು ಒಂದು ವಾರದಲ್ಲಿ ಭಾರತದಿಂದ ನಿರ್ಗಮಿಸಬೇಕಿದೆ.
ಪಾಕಿಸ್ತಾನದಲ್ಲಿನ ಭಾರತದ ದೂತಾವಾಸ ಕಚೇರಿಗಳಲ್ಲಿನ ಸಿಬ್ಬಂದಿ ಸಂಖ್ಯೆ ಕಡಿತ: ಇಸ್ಲಾಮಾಬಾದ್‌ನಲ್ಲಿ ಇರುವ ಭಾರತದ ದೂತಾವಾಸ ಕಚೇರಿಗಳಿಂದ ರಕ್ಷಣೆ, ನೌಕಾಪಡೆ ಮತ್ತು ವಾಯುಪಡೆಯ ಸಲಹೆಗಾರರನ್ನು ಭಾರತವು ವಾಪಸ್ ಕರೆಸಿಕೊಳ್ಳಲಿದೆ. ಇಲ್ಲಿನ ಕಚೇರಿಗಳ ಸಿಬ್ಬಂದಿ ಸಂಖ್ಯೆಯನ್ನು ಈಗಿರುವ 55ರಿಂದ 30ಕ್ಕೆ ಇಳಿಸಲಾಗುತ್ತದೆ. ಇದು ಮೇ 1ಕ್ಕೆ ಮೊದಲು ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.