ನವದೆಹಲಿ: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಯಾವ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದು ಯಾವ ರೀತಿಯ ಗೆಳೆತನ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಟ್ರಂಪ್ ಹಾಗೂ ಮೋದಿ ಆಪ್ತ ಸ್ನೇಹಿತರು ಎಂದು ಪರಸ್ಪರ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ತಿರುಗೇಟು ನೀಡಿದ್ದಾರೆ.
'ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಶ್ವೇತಭವನದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಅದೇ ಸೇನಾ ನಾಯಕನ ಪ್ರಚೋದನಕಾರಿ ಹೇಳಿಕೆಯ ಬಳಿಕ ಪಹಲ್ಗಾಮ್ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು' ಎಂದು ಹೇಳಿದ್ದಾರೆ.
'ಈಜಿಪ್ಟ್‌ನಲ್ಲಿ ನಡೆದ ಗಾಜಾ ಶಾಂತಿ ಶೃಂಗದಲ್ಲಿ ಆಸಿಮ್ ಮುನೀರ್‌ನನ್ನು ಟ್ರಂಪ್ ನೆಚ್ಚಿನ ಫೀಲ್ಡ್ ಮಾರ್ಷಲ್ ಎಂದು ಸಂಭೋಧಿಸಿದ್ದಾರೆ. ಹಾಗಿದ್ದರೆ ಟ್ರಂಪ್ ಭಾರತಕ್ಕೆ ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರೇ ಇದು ಯಾವ ರೀತಿಯ ಗೆಳೆತನ' ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.