ಮಹಾರಾಷ್ಟ್ರ ಸಚಿವ ಆಶಿಶ್ ಶೆಲಾರ್
Credit: X/@ShelarAshish
ಮುಂಬೈ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಧರ್ಮದ ಆಧಾರದ ಮೇಲೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದ್ದರೆ, ರಾಜ್ಯದಲ್ಲಿ ಭಾಷಾವಾರು ಆಧಾರದ ಮೇಲೆ ಜನರ ಮೇಲೆ ದಾಳಿ ನಡೆಸಲಾಗುತ್ತಿದೆ. ಇದು ಬೇಸರದ ಸಂಗತಿ ಎಂದು ಮಹಾರಾಷ್ಟ್ರ ಸಚಿವ ಆಶಿಶ್ ಶೆಲಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯು ಮರಾಠಿ ಜನರ ಅಸ್ಮಿತೆಯನ್ನು ಕಾಪಾಡುವುದರ ಜೊತೆಗೆ ಮರಾಠಿಯೇತರ ನಿವಾಸಿಗಳನ್ನು ರಕ್ಷಿಸುತ್ತದೆ. ಮರಾಠಿ ಭಾಷೆ ನಮಗೆ ರಾಜಕೀಯ ವಿಷಯವಾಗಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.
ಮರಾಠಿ ಮಾತನಾಡದವರ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶೆಲಾರ್, ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಜನರನ್ನು ಗುಂಡು ಹಾರಿಸುವ ಮೊದಲು ಅವರ ಧರ್ಮವನ್ನು ಕೇಳಲಾಗಿದೆ. ಆದೇ ರೀತಿ ನಮ್ಮ ರಾಜ್ಯದಲ್ಲಿ ಭಾಷೆಯ ಆಧಾರದ ಮೇಲೆ ಜನರ ಮೇಲೆ ದಾಳಿ ನಡೆಸಲಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಕೆಲವು ನಾಯಕರು ಹಿಂದೂಗಳನ್ನು ಥಳಿಸುವುದನ್ನು ಹೇಗೆ ಆನಂದಿಸುತ್ತಿದ್ದಾರೆ ಎಂದು ಇಡೀ ರಾಜ್ಯವೇ ನೋಡುತ್ತಿದೆ ಎಂದು ಶೆಲಾರ್ ಯಾರನ್ನೂ ಹೆಸರಿಸದೆ ಗುಡುಗಿದ್ದಾರೆ.
ಕಳೆದ ವಾರ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಕಾರ್ಯಕರ್ತರು ಠಾಣೆ ಜಿಲ್ಲೆಯ ಭಯಂದರ್ ಪ್ರದೇಶದಲ್ಲಿ ಮರಾಠಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಆಹಾರ ಮಳಿಗೆ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಘಟನೆ ಸಂಬಂಧ ಏಳು ಎಂಎನ್‌ಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಮರಾಠಿಯಲ್ಲಿ ಮಾತನಾಡದ ಕಾರಣ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇತ್ತ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ನಾಯಕ ಪ್ರತಾಪ್ ಸರ್ ನಾಯಕ್, ಎಂಎನ್‌ಎಸ್‌ಗೆ ‘ಮರಾಠಿ ಮೇಲೆ ಏಕಸ್ವಾಮ್ಯವಿಲ್ಲ’ ಎಂದು ವಾಗ್ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.