ADVERTISEMENT

ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಬೇಕು; ಆಪರೇಷನ್ ಸಿಂಧೂರ ಮುಂದುವರಿಸಿ: ಓವೈಸಿ

ಪಿಟಿಐ
Published 17 ಜುಲೈ 2025, 6:18 IST
Last Updated 17 ಜುಲೈ 2025, 6:18 IST
<div class="paragraphs"><p>ಅಸಾದುದ್ದೀನ್‌ ಓವೈಸಿ</p></div>

ಅಸಾದುದ್ದೀನ್‌ ಓವೈಸಿ

   

ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಬೇಕು ಮತ್ತು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಮುಂದುವರಿಸಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಒತ್ತಾಯಿಸಿದ್ದಾರೆ.

ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ತೆಲಂಗಾಣದ ಬೋಧನ್ ಪಟ್ಟಣದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಪಹಲ್ಗಾಮ್ ದಾಳಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯಕ್ಕೆ ಒಂದು ಉದಾಹರಣೆಯಾಗಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

ಪಹಲ್ಗಾಮ್ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ನೀಡಿರುವ ಹೇಳಿಕೆಯನ್ನು ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ.

ಪಹಲ್ಗಾಮ್ ದಾಳಿ ನಡೆದ ಮೂರು ತಿಂಗಳ ಬಳಿಕ ಮನೋಜ್‌ ಸಿನ್ಹಾ ಅವರು ಭದ್ರತಾ ವೈಫಲ್ಯದ ಹೊಣೆ ಹೊತ್ತುಕೊಳ್ಳುತ್ತಿದ್ದಾರೆ. ನಿಜಕ್ಕೂ ಅವರು ಕಾರಣರಾಗಿದ್ದರೆ, ತಮ್ಮ ಹುದ್ದೆಯನ್ನು ಕೂಡಲೇ ತ್ಯಜಿಸಬೇಕು ಎಂದು ಓವೈಸಿ ವಾಗ್ದಾಳಿ ನಡೆಸಿದ್ದಾರೆ.

‘ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸೇಡು ತೀರಿಸಿಕೊಳ್ಳಬೇಕು ಮತ್ತು ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮುಂದುವರಿಸಬೇಕು. ಧರ್ಮದ ಹೆಸರಿನಲ್ಲಿ 26 ಮಂದಿಯನ್ನು ಕೊಂದ ನಾಲ್ವರು ಉಗ್ರರನ್ನು ಹಿಡಿದು ಕೊಲ್ಲುವವರೆಗೂ ನಾವು ನಿಮ್ಮನ್ನು ಪ್ರಶ್ನಿಸುತ್ತೇವೆ’ ಎಂದು ಪ್ರಧಾನಿ ಮೋದಿ ವಿರುದ್ಧ ಓವೈಸಿ ಗುಡುಗಿದ್ದಾರೆ.

ಬಾಂಗ್ಲಾದೇಶದ ಮೇಲೆ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಕೆಲವರು ಬುಲ್ಡೋಜರ್‌ ಬಳಸಿ ಮನೆಗಳನ್ನು ಕೆಡವುವುದು, ಮಸೀದಿಗಳನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಿರುವುದು ಬೇಸರದ ಸಂಗತಿ ಎಂದು ಓವೈಸಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.