ADVERTISEMENT

Ind-Pak Tension: ಪಾಕ್‌ ಸೇನಾ ವಕ್ತಾರನ ತಂದೆಗೆ ಅಲ್‌ಖೈದಾ ನಂಟು

ಒಸಾಮಾ ಬಿನ್‌ ಲಾಡೆನ್‌ ಭೇಟಿಯಾಗಿದ್ದ ಪರಮಾಣು ವಿಜ್ಞಾನಿ

ಪಿಟಿಐ
Published 10 ಮೇ 2025, 13:51 IST
Last Updated 10 ಮೇ 2025, 13:51 IST
ಲೆಫ್ಟಿನೆಂಟ್‌ ಜನರಲ್‌ ಅಹಮ್ಮದ್‌ ಷರೀಫ್‌ ಚೌಧರಿ
ಲೆಫ್ಟಿನೆಂಟ್‌ ಜನರಲ್‌ ಅಹಮ್ಮದ್‌ ಷರೀಫ್‌ ಚೌಧರಿ   

ನವದೆಹಲಿ: ‘ಲೆಫ್ಟಿನೆಂಟ್‌ ಜನರಲ್‌ ಅಹಮ್ಮದ್‌ ಷರೀಫ್‌ ಚೌಧರಿ ಪಾಕಿಸ್ತಾನ ಸೇನೆಯ ವಕ್ತಾರ. ಭಾರತ–ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ಕುರಿತಂತೆ ಮಾಧ್ಯಮಗಳಿಗೆ ನಿರಂತರ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಇವರ ತಂದೆ ಪಾಕಿಸ್ತಾನದ ಪರಮಾಣು ವಿಜ್ಞಾನಿಯಾಗಿದ್ದು, ಅಲ್‌ ಖೈದಾ ಸಂಘಟನೆಯ ಜೊತೆಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಷರೀಫ್‌ ಚೌಧರಿ ಅವರು ಸೇನೆಯಲ್ಲಿ ಜನರಲ್‌ ಹುದ್ದೆಯನ್ನು ಹೊಂದಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 9 ಉಗ್ರರ ಅಡಗುತಾಣಗಳ ಮೇಲೆ ಭಾರತ ದಾಳಿ ನಡೆಸಿದ್ದ ಕ್ಷಣದಿಂದಲೂ ಸೇನಾ ಕಾರ್ಯಾಚರಣೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಸೇನೆಯ ಅಂತರ್‌ ಸೇವೆಗಳ ಸಾರ್ವಜನಿಕ ಸಂ‍ಪರ್ಕ ವಿಭಾಗದ (ಐಸಿಪಿಆರ್‌) ಮಹಾ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ವಿಶ್ವಸಂಸ್ಥೆಯ ದಾಖಲೆಗಳ ಪ್ರಕಾರ, ಚೌಧರಿ ತಂದೆ ಸುಲ್ತಾನ್‌ ಬಶೀರುದ್ದೀನ್‌ ಮಹಮ್ಮದ್‌ ಅವರು ಅಮೃತರಸಲ್ಲಿ ಜನಿಸಿದ್ದು, ಅಲ್‌ ಖೈದಾ ನಾಯಕ ಒಸಾಮಾ ಬಿನ್‌ ಲಾಡೆನ್‌ನನ್ನು ಭೇಟಿಯಾಗಿದ್ದರು. ಪರಮಾಣು ಶಸ್ತ್ರಾಸ್ತ್ರ ಯೋಜನೆ, ಅವುಗಳ ತಯಾರಿಕೆಗೆ ಬೇಕಾದ ಅಗತ್ಯ ಮೂಲಸೌಕರ್ಯ, ಪರಿಣಾಮಗಳ ಕುರಿತು ಅಲ್‌ ಖೈದಾ ಸಂಘಟನೆಗೆ ವಿವರಗಳನ್ನು ಒದಗಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು. ಇದೇ ಆರೋಪದ ಮೇಲೆ 2001ರಲ್ಲಿ ಬಂಧನಕ್ಕೊಳಗಾಗಿ ನಂತರ ಬಿಡುಗಡೆಯಾಗಿದ್ದರು. 

ADVERTISEMENT

ಇದಲ್ಲದೇ, 1999ರಲ್ಲಿ ಜನ್ಮತಾಳಿದ ಮೂಲಭೂತವಾದಿ ಸಂಘಟನೆ ‘ಉಮ್ಮಾ ತಮೀರ್–ಎ–ನೌ’ಗಾಗಿ ದೇಣಿಗೆ ಸಂಗ್ರಹಿಸಿದ ಆರೋಪಕ್ಕೆ ಗುರಿಯಾಗಿದ್ದರು. ಪಾಕಿಸ್ತಾನದ ಅಣುಶಕ್ತಿ ಆಯೋಗದಲ್ಲಿ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಧರ್ಮ ಹಾಗೂ ವಿಜ್ಞಾನವನ್ನು ಸಮೀಕರಿಸಿದ ದೃಷ್ಟಿಕೋನದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದರು. ‘ಮೆಕ್ಯಾನಿಕ್ಸ್‌ ಆಫ್‌ ಡೂಮ್ಸ್‌ಡೇ ಆ್ಯಂಡ್‌ ಲೈಫ್‌ ಆಫ್ಟರ್‌ ಡೆತ್‌’ ಹೆಸರಿನ ಕೃತಿ ಅವುಗಳಲ್ಲಿ ಒಂದು. 

85 ವರ್ಷದ ಸುಲ್ತಾನ್‌ ಬಶೀರುದ್ದೀನ್‌ ಮಹಮ್ಮದ್‌ ಈಗ ಇಸ್ಲಾಮಾಬಾದಿನಲ್ಲಿ ನೆಲಸಿದ್ದಾರೆ. ಇವರ ಪುತ್ರ ಚೌಧರಿ 2022ರಿಂದ ಐಸಿಪಿಆರ್‌ ಮಹಾ ನಿರ್ದೇಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.