ಇಸ್ಲಾಮಾಬಾದ್ : ‘ಈಗ ನಿಷ್ಕ್ರಿಯವಾಗಿರುವ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್)ಗೆ ಪರ್ಯಾಯವಾಗಿ ಸಂಸ್ಥೆಯನ್ನು ಹುಟ್ಟುಹಾಕುವ ಪ್ರಸ್ತಾವವನ್ನು ಪಾಕಿಸ್ತಾನ, ಚೀನಾ ಸಿದ್ಧಪಡಿಸುತ್ತಿವೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ.
‘ಪ್ರಾದೇಶಿಕ ಸಹಭಾಗಿತ್ವ ಹಾಗೂ ಉತ್ತಮ ರೀತಿಯ ಸಂಪರ್ಕ ಸಾಧಿಸುವ ಉದ್ದೇಶದಿಂದ ಹೊಸ ಸಂಸ್ಥೆಯನ್ನು ಹುಟ್ಟುಹಾಕುವ ಆಲೋಚನೆ ಇದೆ. ಇಸ್ಲಾಮಾಬಾದ್ ಹಾಗೂ ಬೀಜಿಂಗ್ ಈ ವಿಷಯದಲ್ಲಿ ಮಾತುಕತೆ ನಡೆಸುತ್ತಿವೆ’ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
2016ರ ಸಾರ್ಕ್ ಶೃಂಗಸಭೆ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿತ್ತು. ಆ ವರ್ಷ ಸೆ.18ರಂದು ಜಮ್ಮುವಿನ ಭಾರತೀಯ ಸೇನಾ ನೆಲೆ ಮೇಲೆ ದಾಳಿ ನಡೆದ ಬಳಿಕ ಭಾರತವು ಭಾಗವಹಿಸಲು ನಿರಾಕರಿಸಿತ್ತು. ಆನಂತರ ಬಾಂಗ್ಲಾದೇಶ, ಭೂತಾನ್ ಹಾಗೂ ಅಫ್ಗಾನಿಸ್ತಾನವೂ ಭಾಗವಹಿಸಲು ನಿರಾಕರಿಸಿದವು. ಹೀಗಾಗಿ ಶೃಂಗಸಭೆಯು ರದ್ದುಗೊಂಡಿತ್ತು.
ಭಾರತ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಸದಸ್ಯ ‘ಸಾರ್ಕ್’ನ ಸದಸ್ಯ ರಾಷ್ಟ್ರಗಳಾಗಿವೆ.
‘ಚೀನಾದ ಯುನ್ಮಾನ್ ಪ್ರಾಂತ್ಯದ ಕುನ್ಮಿಂಗ್‌ನಲ್ಲಿ ಚೀನಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರತಿನಿಧಿಗಳು ಹೊಸ ಸಂಸ್ಥೆ ಕಟ್ಟುವ ಪ್ರಸ್ತಾವ ರೂಪಿಸಲು ಸಭೆ ನಡೆಸಿದ್ದಾರೆ. ಈಗಿರುವ ‘ಸಾರ್ಕ್’ ಒಕ್ಕೂಟವನ್ನು ಬದಲಾಯಿಸುವ ಉದ್ದೇಶ ಹೊಂದಿದ್ದು, ಹೊಸ ಒಕ್ಕೂಟಕ್ಕೆ ಸಾರ್ಕ್ ರಾಷ್ಟ್ರಗಳನ್ನು ಆಹ್ವಾನಿಸುವ ಯೋಜನೆ ಇದೆ’ ಎಂದು ಮೂಲಗಳು ತಿಳಿಸಿವೆ.
ಒಕ್ಕೂಟ ರಚನೆಯ ಆಲೋಚನೆಯನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ತಳ್ಳಿಹಾಕಿದೆ.
‘ನಾವು ಯಾವುದೇ ಒಕ್ಕೂಟ ರಚಿಸುತ್ತಿಲ್ಲ’ ಎಂದು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಸಲಹೆಗಾರ ಎಂ.ತೌಹೀದ್ ಹೊಸೈನ್ ತಿಳಿಸಿದ್ದರು.
ಮೂಲಗಳ ಪ್ರಕಾರ, ಭಾರತವನ್ನು ಆಹ್ವಾನಿಸುವ ಸಾಧ್ಯತೆಯಿದೆ. ಶ್ರೀಲಂಕಾ, ಮಾಲ್ದೀವ್ಸ್, ಅಫ್ಗಾನಿಸ್ತಾನ ಕೂಡ ಸೇರ್ಪಡೆಯಾಗುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.