ರಾಹುಲ್ ಗಾಂಧಿ
ನವದೆಹಲಿ: ‘ಪಾಕಿಸ್ತಾನದ ವಿರುದ್ಧ ಹೋರಾಡಲು ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಇದ್ದುದರಿಂದ, ಸೇನೆಗೆ ಕೈಕಟ್ಟಿಕೊಂಡು ದಾಳಿ ಮಾಡುವಂತೆ ಆದೇಶಿಸಿತು’ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತು ನಡೆಯುತ್ತಿರುವ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಜನರ ಜೀವ ಉಳಿಸುವ ಬದಲು ಸರ್ಕಾರವು ಅದರಿಂದ(ಆಪರೇಷನ್ ಸಿಂಧೂರ) ರಾಜಕೀಯ ಲಾಭ ಪಡೆಯಲು ಉತ್ಸುಕವಾಗಿದೆ’ ಎಂದರು.
‘ಪಹಲ್ಗಾಮ್ ವಿಚಾರದಲ್ಲಿ ಒಂದೇ ಒಂದು ದೇಶವು ಪಾಕಿಸ್ತಾನವನ್ನು ಖಂಡಿಸಿಲ್ಲ, ಬದಲಾಗಿ ಭಯೋತ್ಪಾದನೆಯನ್ನು ಖಂಡಿಸಿದ್ದವು. ಇದು ನಮ್ಮ ದೇಶದ ಬಗ್ಗೆ ಅವರಿಗಿರುವ ಮನೋಭಾವವನ್ನು ತೋರಿಸುತ್ತದೆ’ ಎಂದರು.
ಈ ನಿರ್ಣಾಯಕ ಸಂದರ್ಭದಲ್ಲಿ ಇಡೀ ವಿರೋಧ ಪಕ್ಷವು ಸರ್ಕಾರದೊಂದಿಗೆ ನಿಂತಿದೆ ಎಂಬ ಅಂಶವನ್ನು ಪುನರುಚ್ಚರಿಸಿದರು.
‘‘ಯಾವುದೇ ಭಯೋತ್ಪಾದಕ ಕೃತ್ಯವನ್ನು ಯುದ್ಧದ ಕೃತ್ಯ’ ಎಂದು ಭಾವಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಇದರರ್ಥ ಯಾವುದೇ ಭಯೋತ್ಪಾದಕನು ಒಂದು ದಾಳಿಯನ್ನು ನಡೆಸಿ ಭಾರತವನ್ನು ಯುದ್ಧ ಮಾಡುವಂತೆ ಒತ್ತಾಯಿಸಬಹುದು. ನೀವು(ಸರ್ಕಾರ) ಭಯೋತ್ಪಾದಕರಿಗೆ ಅಧಿಕಾರವನ್ನು ನೀಡುತ್ತಿದ್ದೀರಿ. ಅವರಿಗೆ ಯುದ್ಧ ಮಾಡಬೇಕು ಎಂದು ಬಯಸಿದ ಕ್ಷಣ, ಭಯೋತ್ಪಾದಕ ದಾಳಿಯನ್ನು ನಡೆಸಬಹುದು’ ಎಂದು ಅವರು ಹೇಳಿದರು.
‘ಟ್ರಂಪ್ ಟೀಕಿಸದ ಸರ್ಕಾರ’
‘ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಪಹಲ್ಗಾಮ್ ದಾಳಿಗೆ ಪರೋಕ್ಷ ಕಾರಣನಾಗಿದ್ದಾನೆ. ಆ ವ್ಯಕ್ತಿಯನ್ನು ಶ್ವೇತಭವನಕ್ಕೆ ಕರೆದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆತಿಥ್ಯ ನೀಡಿದ್ದಾರೆ. ಆದರೆ, ಈ ಬಗ್ಗೆ ಭಾರತ ಸರ್ಕಾರ ಅಮೆರಿಕ ಅಧ್ಯಕ್ಷರನ್ನು ಟೀಕಿಸಿಲ್ಲ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.