ADVERTISEMENT

'ಕೈ' ನಾಯಕನ ಪತ್ನಿಗೆ ಪಾಕ್ ನಂಟು; ಅಚ್ಚರಿಯ ಅಂಶಗಳನ್ನು ಬಯಲು ಮಾಡಿದ SIT: ಹಿಮಂತ

ಸುಮೀರ್‌ ಕರ್ಮಾಕರ್‌
Published 11 ಸೆಪ್ಟೆಂಬರ್ 2025, 7:15 IST
Last Updated 11 ಸೆಪ್ಟೆಂಬರ್ 2025, 7:15 IST
<div class="paragraphs"><p>ಕಾಂಗ್ರೆಸ್‌ ನಾಯಕ ಗೌರವ್‌ ಗೊಗಯಿ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ</p></div>

ಕಾಂಗ್ರೆಸ್‌ ನಾಯಕ ಗೌರವ್‌ ಗೊಗಯಿ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

   

ಕೃಪೆ: ಪಿಟಿಐ

ಇಂಫಾಲ: ಕಾಂಗ್ರೆಸ್‌ ನಾಯಕ ಗೌರವ್‌ ಗೊಗಯಿ ಅವರ ಪತ್ನಿಯು ಪಾಕಿಸ್ತಾನದೊಂದಿಗೆ ಹೊಂದಿರುವ ನಂಟಿನ ಕುರಿತು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), 'ಅಚ್ಚರಿಯ ವಿಚಾರಗಳನ್ನು ಬಯಲು ಮಾಡಿದೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಬುಧವಾರ ಹೇಳಿದ್ದಾರೆ.

ADVERTISEMENT

ಪಾಕ್‌ ಪ್ರಜೆ ಅಲಿ ತೌಕೀರ್ ಶೇಖ್‌ ಮತ್ತು ಆತನ ಸಹಚರರು ನಡೆಸುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ತನಿಖೆ ಸಲುವಾಗಿ ಫ್ರೆಬ್ರುವರಿ 17ರಂದು ರಚಿಸಿದ್ದ ಎಸ್‌ಐಟಿ, ಬುಧವಾರ ಸಂಜೆ (ಸೆ.11) ತಮಗೆ ವರದಿ ನೀಡಿದೆ ಎಂದು ಶರ್ಮಾ ತಿಳಿಸಿದ್ದಾರೆ.

'ನಮ್ಮ ದೇಶದ ಸಾರ್ವಭೌಮತೆಗೆ ಬೆದರಿಕೆಯೊಡ್ಡುವಂತಹ ಭಾರಿ ಪಿತೂರಿಯತ್ತ ಬೊಟ್ಟು ಮಾಡುವ ಅಚ್ಚರಿಯ ಅಂಶಗಳು ಸಮಗ್ರ ತನಿಖೆಯ ವೇಳೆ ಬಯಲಾಗಿವೆ' ಎಂದಿದ್ದಾರೆ.

ಗೌರವ್‌ ಹಾಗೂ ಅವರ ಪತ್ನಿ, ಬ್ರಿಟಿಷ್‌ ಪ್ರಜೆ ಎಲಿಜಬೆತ್ ಅವರ ಹೆಸರನ್ನು ಉಲ್ಲೇಖಿಸದೆ, 'ಭಾರತದ ಸಂಸತ್ ಸದ್ಯಸ್ಯರನ್ನು ವಿವಾಹವಾಗಿರುವ ಬ್ರಿಟಿಷ್‌ ಪ್ರಜೆಯೊಬ್ಬರು, ಅಲಿ ತೌಕೀರ್‌ ಶೇಖ್‌ ನಡೆಸುತ್ತಿರುವ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಎಸ್‌ಐಟಿ ಬಹಿರಂಗಪಡಿಸಿದೆ. ಅಷ್ಟಲ್ಲದೆ, ಪಾಕಿಸ್ತಾನದ ಆಂತರಿಕ ಸಚಿವಾಲಯವು ಅಸ್ಸಾಂನ ಗೌರವಾನ್ವಿತ ಸಂಸದರು ತಮ್ಮ ದೇಶಕ್ಕೆ ಭೇಟಿ ನೀಡಲು ವ್ಯವಸ್ಥೆ ಮಾಡಿತ್ತು ಎಂಬುದರ ಮೇಲೂ ಬೆಳಕು ಚೆಲ್ಲಿದೆ' ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರವು ಎಸ್‌ಐಟಿ ವರದಿಯನ್ನು ಸಮಗ್ರವಾಗಿ ವಿಶ್ಲೇಷಿಸಿ, ಸಚಿವ ಸಂಪುಟದ ಮುಂದೆ ಇಡಲಿದೆ ಎಂದಿರುವ ಸಿಎಂ, 'ತನಿಖೆ ವೇಳೆ ಕಲೆಹಾಕಿರುವ ಮಾಹಿತಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನಂತರ ಸಾರ್ವಜನಿಕಗೊಳಿಸಲಾಗುವುದು' ಎಂದು ಸ್ಪಷ್ಟಪಡಿಸಿದ್ದಾರೆ.

ಅಸ್ಸಾಂ ವಿಧಾನಸಭೆಗೆ 2026ರಲ್ಲಿ ಚುನಾವಣೆ ನಡೆಯಲಿದ್ದು, ಎಸ್‌ಐಟಿ ರಚನೆ ವಿಚಾರವು ರಾಜಕೀಯ ಚರ್ಚೆಗೆ ಕಾರಣವಾಗಿತ್ತು.

ಸದ್ಯ ಅಸ್ಸಾಂ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿರುವ ಗೌರವ್‌, ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಆಧಾರವಿಲ್ಲದ ಆರೋಪಗಳನ್ನು ಮಾಡುತ್ತಿರುವ ಶರ್ಮಾ, ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.