ADVERTISEMENT

ವಿದೇಶಕ್ಕೆ ನಿಯೋಗ | ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಕಳುಹಿಸಬೇಕೆ?: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2025, 11:13 IST
Last Updated 17 ಮೇ 2025, 11:13 IST
<div class="paragraphs"><p>ಗೌರವ್ ಗೊಗೊಯಿ, ಡಾ. ಸಯದ್ ನಾಸೀರ್ ಹುಸೇನ್‌</p></div>

ಗೌರವ್ ಗೊಗೊಯಿ, ಡಾ. ಸಯದ್ ನಾಸೀರ್ ಹುಸೇನ್‌

   

ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿವಿಧ ಪಕ್ಷಗಳ ಸಂಸದರ ನಿಯೋಗಗಳನ್ನು ಕಳಹಿಸುವ ಪ್ರಕ್ರಿಯೆಯು ಈಗ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್‌ಸಮರಕ್ಕೆ ಕಾರಣವಾಗಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮೇ 16ರಂದು ನಿಯೋಗಕ್ಕೆ ನಾಲ್ಕು ಸಂಸದರ ಹೆಸರು ಶಿಫಾರಸು ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೋರಿದ್ದರು. ಅದರಂತೆಯೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸೂಚನೆಯಂತೆ ಆನಂದ ಶರ್ಮಾ, ಗೌರವ್ ಗೊಗೊಯಿ, ಡಾ. ಸಯದ್ ನಾಸೀರ್ ಹುಸೇನ್‌ ಮತ್ತು ರಾಜ್‌ ಬ್ರಾರ್‌ ಅವರ ಹೆಸರುಗಳನ್ನು ಶಿಫಾರಸು ಮಾಡಿ ಶುಕ್ರವಾರ ಸಂಜೆ ಪಟ್ಟಿ ಕಳುಹಿಸಿತ್ತು ಎಂದು ಪಕ್ಷದ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

ADVERTISEMENT

ಆದರೆ ನಂತರದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಶಿಫಾರಸುಗೊಂಡ ನಾಲ್ವರ ಹೆಸರುಗಳನ್ನು ಕೈಬಿಟ್ಟು ಶಶಿ ತರೂರ್ ಅವರ ಹೆಸರನ್ನು ಸೇರಿಸಿರುವುದಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿಯ ಈ ತಂತ್ರವು ಒಡಕು ಮೂಡಿಸುವ ಯತ್ನವಾಗಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿರುವ ಬಿಜೆಪಿಯ ವಕ್ತಾರ ಅಮಿತ್ ಮಾಳವೀಯ, ‘ಕಾಂಗ್ರೆಸ್ ಶಿಫಾರಸು ಮಾಡಿರುವ ಹೆಸರುಗಳು ಅಚ್ಚರಿ ಮೂಡಿಸಿರುವುದು ಮಾತ್ರವಲ್ಲ, ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ’ ಎಂದಿದ್ದಾರೆ.

ಸಂಸದ ಸಯದ್ ನಾಸೀರ್ ಹುಸೇನ್ ಹೆಸರನ್ನು ಕಾಂಗ್ರೆಸ್ ಶಿಫಾರಸು ಮಾಡಿದೆ. ಇದು ನಿಜಕ್ಕೂ ಆಘಾತಕಾರಿ. ರಾಜ್ಯಸಭೆಗೆ ಆಯ್ಕೆಯಾದ ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕದ ವಿಧಾನಸೌಧದ ಆವರಣದಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಎಂಬ ಘೋಷಣೆ ಕೂಗಿದ ಬೆಂಬಲಿಗರನ್ನು ಹೊಂದಿರುವ ಇವರ ಹೆಸರನ್ನು ಕಾಂಗ್ರೆಸ್ ಶಿಫಾರಸು ಮಾಡಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಘೋಷಣೆ ಕೂಗಿರುವುದು ದಾಖಲಾಗಿದೆ. ಸಾಂದರ್ಭಿಕ ಸಾಕ್ಷಿಗಳಿವೆ. ದೇಶದ ಭದ್ರತೆಯ ರಾಜತಾಂತ್ರಿಕ ಸಭೆಗೆ ಸಯದ್ ನಾಸೀರ್ ಹೆಸರನ್ನು ಕಾಂಗ್ರೆಸ್ ಶಿಫಾರಸು ಮಾಡಿರುವುದು ಅಚ್ಚರಿ ಮೂಡಿಸಿದೆ’ ಎಂದಿದ್ದಾರೆ.

ಕಾಂಗ್ರೆಸ್ ಶಿಫಾರಸು ಮಾಡಿರುವ ಮತ್ತೊಂದು ಹೆಸರು ಗೌರವ್ ಗೊಗೊಯಿ. ಇವರು ಪಾಕಿಸ್ತಾನದಲ್ಲಿ 15 ದಿನ ಕಳೆದಿದ್ದಾರೆ. ಅಟಾರಿ ಗಡಿಯಲ್ಲಿ ಇವರು ಹೋಗಿ ಬಂದಿದ್ದು ದಾಖಲಾಗಿದೆ.  ಗೊಗೊಯಿ‌ ಅವರ ಪತ್ನಿ ಎಲಿಜಬೆತ್‌ ಕೊಲ್ಬರ್ನ್‌ ಅವರೂ ಈ ಸಂದರ್ಭದಲ್ಲಿ ಅವರೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾರೆ. ಎಲಿಜಬೆತ್ ಅವರು ಪಾಕಿಸ್ತಾನ ಸೇನೆಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರು ತಮ್ಮೊಂದಿಗೆ 90 ಯುವಕರನ್ನು ಪಾಕಿಸ್ತಾನದ ರಾಯಭಾರ ಕಚೇರಿಗೆ ಕರೆದೊಯ್ದಿದ್ದರು. ಈಗಲೂ ಪಾಕಿಸ್ತಾನದಿಂದ ಅವರು ವೇತನ ಪಡೆಯುತ್ತಿದ್ದಾರೆ. ಇವೆಲ್ಲವೂ ರಾಷ್ಟ್ರದ ಭದ್ರತೆಗೆ ಧಕ್ಕೆ ತರುವ ವಿಷಯವಾಗಿದೆ. ಇವರ ಹೆಸರುಗಳನ್ನು ಶಿಫಾರಸು ಮಾಡಿ ಕಾಂಗ್ರೆಸ್ ಏನು ಹೇಳಲು ಬಯಸುತ್ತಿದೆ? ಯಾರು ಇಚ್ಛಾಶಕ್ತಿಯನ್ನು ಆ ಪಕ್ಷ ಕಾಯುತ್ತಿದೆ? ಎಂಬುದನ್ನು ಆ ಪಕ್ಷವೇ ದೃಢಪಡಿಸಬೇಕು ಎಂದು ಮಾಳವೀಯ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.