ADVERTISEMENT

ವಿದೇಶಾಂಗ ನೀತಿಯ ವೈಫಲ್ಯ: ಕಾಂಗ್ರೆಸ್

ಪಾಕ್‌ಗೆ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:07 IST
Last Updated 5 ಜೂನ್ 2025, 14:07 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ವಿಶ್ವಸಂಸ್ಥೆಯ 15 ಸದಸ್ಯರ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನ ಹಾಗೂ ಮತ್ತೊಂದು ಸಮಿತಿಯ ಅಧ್ಯಕ್ಷ ಸ್ಥಾನವನ್ನು ಪಾಕಿಸ್ತಾನಕ್ಕೆ ನೀಡಿರುವುದು ‘ದುರದೃಷ್ಟಕರ’ ಎಂದು ಕಾಂಗ್ರೆಸ್‌ ಗುರುವಾರ ಹೇಳಿದೆ.

ಪಕ್ಷವು ಈ ಬೆಳವಣಿಗೆಯನ್ನು ‘ನಮ್ಮ ವಿದೇಶಾಂಗ ನೀತಿಯ ವೈಫಲ್ಯ’ದ ದುಃಖಕರ ಕಥೆ ಎಂದು ಬಣ್ಣಿಸಿದೆ. ಅದೇ ವೇಳೆ, ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸಿರುವ ಪಾಕಿಸ್ತಾನವನ್ನು ಜಾಗತಿಕ ಸಮುದಾಯವು ಒಪ್ಪಿಕೊಂಡಿರುವುದಾದರೂ ಹೇಗೆ ಎಂದೂ ಪ್ರಶ್ನಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಾಗತಿಕ ಸಮುದಾಯವು ಭಾರತ ಮತ್ತು ಪಾಕಿಸ್ತಾನವನ್ನು ಸಮಾನವಾಗಿ ಕಾಣದಂತೆ ಮಾಡಲು ಸರ್ಕಾರವು ದೃಢ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಪಾಕಿಸ್ತಾನವನ್ನು ಅದು ಮಾಡಿರುವ ಪಾಪಗಳಿಗೆ ಹೊಣೆಗಾರರನ್ನಾಗಿ ಮಾಡುವುದು ಭಾರತಕ್ಕೆ ಮಾತ್ರವಲ್ಲ, ಜಾಗತಿಕ ಸಮುದಾಯದ ಹಿತಾಸಕ್ತಿಗಳಿಗೂ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ತಾಲಿಬಾನ್‌ ನಿರ್ಬಂಧದ ವಿಶ್ವಸಂಸ್ಥೆಯ ಸಮಿತಿಯ ಅಧ್ಯಕ್ಷ ಸ್ಥಾನ ಮತ್ತು ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನವನ್ನು ಪಾಕಿಸ್ತಾನಕ್ಕೆ ವಹಿಸಿರುವ ಬೆಳವಣಿಗೆಗಳ ಬೆನ್ನಲ್ಲೇ ಖರ್ಗೆ ಅವರು ಹೇಳಿಕೆ ನೀಡಿದ್ದಾರೆ.

‘ಪಾಕಿಸ್ತಾನವು ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿದೆಯಾದರೆ, ಭಾರತವು ಭಯೋತ್ಪಾದನೆಯ ಬಲಿಪಶು. ಆದ್ದರಿಂದ, ಜಾಗತಿಕ ಸಮುದಾಯವು ಈ ಎರಡು ದೇಶಗಳನ್ನು ಸಮಾನವಾಗಿ ಕಾಣಲು ಸಾಧ್ಯವಿಲ್ಲ. ಇದಕ್ಕಾಗಿ ಸೂಕ್ತ ಮತ್ತು ದೃಢವಾದ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.