ADVERTISEMENT

ಪ್ಯಾಲಿಸ್ಟೀನ್‌: ಭಾರತ ನಾಯಕತ್ವ ಪ್ರದರ್ಶಿಸಬೇಕು; ಸೋನಿಯಾ ಗಾಂಧಿ

ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಪಾದನೆ

ಪಿಟಿಐ
Published 25 ಸೆಪ್ಟೆಂಬರ್ 2025, 15:57 IST
Last Updated 25 ಸೆಪ್ಟೆಂಬರ್ 2025, 15:57 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಪ್ಯಾಲಿಸ್ಟೀನ್‌ ವಿಚಾರದಲ್ಲಿ ಭಾರತವು ನಾಯಕತ್ವವನ್ನು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಪ್ರತಿಪಾದಿಸಿದ್ದಾರೆ. 

ಆದರೆ ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಮೌನಕ್ಕೆ ಜಾರಿದ್ದು, ಮಾನವೀಯತೆ ಮತ್ತು ನೈತಿಕತೆಗೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದ್ದಾರೆ.

‘ಸರ್ಕಾರದ ಕ್ರಮಗಳು ಸಂವಿಧಾನದ ಮೌಲ್ಯಗಳು ಮತ್ತು ಅದರ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕು. ಆದರೆ ಈ ವಿಷಯದಲ್ಲಿ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ವೈಯಕ್ತಿಕ ಸ್ನೇಹದಿಂದ ನಡೆಯುತ್ತಿರುವಂತೆ ಭಾಸವಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ADVERTISEMENT

‘ಹೀಗೆ ವೈಯಕ್ತಿವಾದ ರಾಜತಾಂತ್ರಿಕತೆ ಮೇಲೆ ನಡೆಯುವುದು ಎಂದಿಗೂ ಸಮರ್ಥನೀಯವಲ್ಲ ಮತ್ತು ಅದು ಭಾರತದ ವಿದೇಶಾಂಗ ನೀತಿಯ ದಿಕ್ಸೂಚಿ ಆಗಲು ಸಾಧ್ಯವೂ ಇಲ್ಲ’ ಎಂದು ಅವರು ತಿಳಿಸಿದ್ದಾರೆ. 

ಇಸ್ರೇಲ್‌–ಪ್ಯಾಲಿಸ್ಟೀನ್‌ ಸಂಘರ್ಷದ ಕುರಿತು ಅವರು ‘ದಿ ಹಿಂದೂ’ದಲ್ಲಿ ಗುರುವಾರ ಬರೆದಿರುವ ಲೇಖನದಲ್ಲಿ ಮೋದಿ ಸರ್ಕಾರದ ನಿಲುವನ್ನು ತೀವ್ರವಾಗಿ ಟೀಕಿಸಿದ್ದಾರೆ.

‘ಪ್ಯಾಲಿಸ್ಟೀನ್‌ ಅನ್ನು ದೇಶವೆಂದು ಗುರುತಿಸುವಲ್ಲಿ ಬ್ರಿಟನ್‌, ಕೆನಡಾ, ಪೋರ್ಚುಗಲ್‌, ಆಸ್ಟ್ರೇಲಿಯಾ ಜತೆಗೆ ಇದೀಗ ಫ್ರಾನ್ಸ್‌ ಸಹ ಸೇರಿಕೊಂಡಿದೆ. ದೀರ್ಘ ಕಾಲದಿಂದ ಬಳಲಿರುವ ಪ್ಯಾಲಿಸ್ಟೀನ್‌ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಈಡೇರಿಸಲು ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ಅವರು ವಿವರಿಸಿದ್ದಾರೆ. 

ವಿಶ್ವಸಂಸ್ಥೆಯ 193 ದೇಶಗಳ ಪೈಕಿ 150ಕ್ಕೂ ಹೆಚ್ಚು ದೇಶಗಳು ಪ್ಯಾಲಿಸ್ಟೀನ್‌ ಅನ್ನು ಬೆಂಬಲಿಸಿವೆ ಎಂದು ಅವರು ಉಲ್ಲೇಖಿಸಿದ್ದಾರೆ. 

ಭಾರತವು 1988ರ ನವೆಂಬರ್‌ 18ರಂದು ಪ್ಯಾಲಿಸ್ಟೀನ್‌ ಅನ್ನು ದೇಶವಾಗಿ ಗುರುತಿಸುವ ಮೂಲಕ ನಾಯಕತ್ವ ಪ್ರದರ್ಶಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತ ಪ್ರಶ್ನಿಸಿತ್ತು. ಅಲ್ಲದೆ 1954–62ರ ಅಲ್ಜೀರಿಯಾ ಸ್ವಾತಂತ್ರ್ಯ ಹೋರಾಟದ ವೇಳೆ ಭಾರತ ಅಲ್ಜೀರಿಯಾ ಪರ ಬಲವಾಗಿ ಧ್ವನಿಯೆತ್ತಿತ್ತು. ಪೂರ್ವ ಪಾಕಿಸ್ತಾನದಲ್ಲಿನ ನರಮೇಧವನ್ನು ತಡೆಯಲು ಭಾರತ ಮಧ್ಯ ಪ್ರವೇಶಿಸಿತ್ತು. ಆ ಬಳಿಕ 1971ರಲ್ಲಿ ಬಾಂಗ್ಲಾದೇಶ ಜನನವಾಯಿತು ಎಂಬ ಮಾಹಿತಿಯನ್ನು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.  

ನ್ಯಾಯ, ಗುರುತು, ಘನತೆ ಮತ್ತು ಮಾನವ ಹಕ್ಕುಗಳಿಗಾಗಿ ನಡೆಯುತ್ತಿರುವ ಪ್ಯಾಲಿಸ್ಟೀನ್‌ ಹೋರಾಟದ ಬಗ್ಗೆ ಭಾರತ ನಾಯಕತ್ವವನ್ನು ಪ್ರದರ್ಶಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.