ನವದೆಹಲಿ: ‘ಪಂಚಾಯ್ತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಘೋಷಿಸುವುದು ಕಡ್ಡಾಯ’ ಎಂಬ ಹಿಮಾಚಲಪ್ರದೇಶ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಮಂಡಿ ಜಿಲ್ಲೆಯ ಪಂಗ್ನಾ ಗ್ರಾಮ ಪಂಚಾಯ್ತಿಯ ಪ್ರಧಾನ್ ಆಗಿದ್ದ ಬಸಂತ್ ಲಾಲ್ ಅರ್ಜಿಯನ್ನು ನ್ಯಾ. ಸೂರ್ಯ ಕಾಂತ್ ಮತ್ತು ನ್ಯಾ. ಕೋಟೀಶ್ವರ ಸಿಂಗ್ ಅವರಿದ್ದ ಪೀಠವು ವಜಾಗೊಳಿಸಿದೆ.
ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸುವವರು ಘೋಷಿಸದಿರುವುದು ಅಕ್ರಮ ಎಂದು ಹಿಮಾಚಲ ಪ್ರದೇಶ ಪಂಚಾಯತ್ ರಾಜ್ ಕಾಯ್ದೆ 1994ರಲ್ಲಿ ಹೇಳಿರುವುದು, ಇಂಥ ಕಾಯ್ದೆ ಉಲ್ಲಂಘಿಸಿದವರ ಉಮೇದುವಾರಿಕೆಯನ್ನು ಅನೂರ್ಜಿತಗೊಳಿಸಲು ಪೂರಕ ಆಧಾರವಾಗಿದೆ ಎಂದು ಹೈಕೋರ್ಟ್ 2024ರ ಅ. 16ರಂದು ಹೇಳಿತ್ತು.
‘ಹೈಕೋರ್ಟ್‌ನ ಆದೇಶದ ವಿರುದ್ಧ ಅರ್ಜಿದಾರರು ಸಲ್ಲಿಸಿರುವ ಮೇಲ್ಮನವಿಯಲ್ಲಿ ಯಾವುದೇ ಪೂರಕ ಮಾಹಿತಿಯನ್ನು ನೀಡಲು ವಿಫಲರಾಗಿದ್ದಾರೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗವು ರಚಿಸಿರುವ ಮಾರ್ಗಸೂಚಿ ಸರಿಯಾಗಿದ್ದು, ಅದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹೀಗಾಗಿ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳನ್ನು ಕಡ್ಡಾಯವಾಗಿ ಘೋಷಿಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕ್ರಿಮಿನಲ್ ಪ್ರಕರಣಗಳ ಘೋಷಣೆ ಮಾಡಿಕೊಂಡಿಲ್ಲ ಎಂಬ ಕಾರಣಕ್ಕಾಗಿ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರದಲ್ಲಿ ಅವರು ಕ್ರಿಮಿನಲ್ ಪ್ರಕರಣಗಳಿಂದ ಖುಲಾಸೆಗೊಂಡಿದ್ದರು. ಆದರೆ ಅವರ ವಿರುದ್ಧದ ಅನರ್ಹತೆ ಮುಂದುವರಿದಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ‘ಅರ್ಜಿದಾರರು ತಮ್ಮ ವಿರುದ್ಧ ಇದ್ದ ಕ್ರಿಮಿನಲ್ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದರೂ, ಆರು ವರ್ಷಗಳ ಅನರ್ಹತೆ ತುಸು ಹೆಚ್ಚಾಯಿತು. ಆದರೂ, ಇಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಈ ವಿಷಯ ಕುರಿತು ಯಾವುದೇ ಕೋರಿಕೆ ಇಲ್ಲದ ಕಾರಣ, ಪೀಠವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.