ADVERTISEMENT

ಕೋವಿಡ್‌ ಪರಿಣಾಮ: ಮಕ್ಕಳಲ್ಲಿ ಬೊಜ್ಜು ಹೆಚ್ಚಳ, ಆರೋಗ್ಯ ತಜ್ಞರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 15:55 IST
Last Updated 21 ಮಾರ್ಚ್ 2021, 15:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌–19 ಪಿಡುಗಿನಿಂದಾಗಿ ಮಕ್ಕಳು ಮನೆಯಲ್ಲಿಯೇ ಇರಬೇಕಾಗಿದೆ. ಆಟವಾಡುವುದು ಸೇರಿದಂತೆ ದೈಹಿಕ ಚಟುವಟಿಕೆಗಳು ಇಲ್ಲ. ಜೊತೆಗೆ, ಅತಿಯಾದ ಜಂಕ್‌ ಆಹಾರ ಸೇವನೆಯಿಂದಾಗಿ ಅವರಲ್ಲಿ ಬೊಜ್ಜು ಕಾಣಿಸಿಕೊಳ್ಳುವ ಅಪಾಯ ಹೆಚ್ಚು ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಸಿದ್ದಾರೆ.

ಸಾಮಾಜಿಕ–ಆರ್ಥಿಕವಾಗಿ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಮಕ್ಕಳು ಹೆಚ್ಚು ತೊಂದರೆಗೆ ಒಳಗಾಗುವ ಅಪಾಯ ಇದೆ ಎಂದೂ ಹೇಳಿದ್ದಾರೆ.

‘ಮಕ್ಕಳಲ್ಲದೇ, ಈ ವರ್ಗದ ಯುವಕರಲ್ಲಿಯೂ ತೂಕ ಹೆಚ್ಚಳ ಸಮಸ್ಯೆ ಕಾಡಬಹುದು. ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯುವುದರಿಂದ ನಮ್ಕೀನ್‌, ಬಿಸ್ಕತ್ತುಗಳು, ಬ್ರೆಡ್‌, ಬನ್ಸ್‌, ನೂಡಲ್ಸ್‌, ಐಸ್‌ಕ್ರೀಂ, ಕುಕೀಸ್‌, ಕೇಕ್‌, ಸಕ್ಕರೆಅಂಶ ಇರುವ ಪಾನೀಯಗಳನ್ನು ಪದೇಪದೇ ಸೇವಿಸುತ್ತಾರೆ. ಇಂಥ ಆಹಾರ, ಪಾನೀಯಗಳಲ್ಲಿ ಪಿಷ್ಟ, ಸಕ್ಕರೆ, ಕೊಬ್ಬಿನ ಪ್ರಮಾಣ ಅಧಿಕ. ಇಂಥ ಪದಾರ್ಥಗಳ ಸೇವನೆ ತೂಕದಲ್ಲಿ ಹೆಚ್ಚಳ, ಬೊಜ್ಜಿಗೆ ಕಾರಣವಾಗುತ್ತದೆ’ ಎಂದು ನವದೆಹಲಿ ಮೂಲದ ಸಾರ್ವಜನಿಕ ಆರೋಗ್ಯ, ಪೌಷ್ಟಿಕತೆ ಹಾಗೂ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಡಾ.ಶೈಲಾ ವೀರ್‌ ಹೇಳುತ್ತಾರೆ.

ADVERTISEMENT

ಕೋವಿಡ್‌–19 ಪಿಡುಗು ವ್ಯಾಪಕವಾಗುವುದಕ್ಕೂ ಮೊದಲು ದೇಶದ 22 ರಾಜ್ಯಗಳಲ್ಲಿ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ’ಯನ್ನು ನಡೆಸಲಾಗಿದೆ. ಪಿಡುಗು ವ್ಯಾಪಕಗೊಂಡ ನಂತರವೂ ಸಮೀಕ್ಷೆ ನಡೆಸಿದಾಗ, ಮಕ್ಕಳಲ್ಲಿನ ಪೌಷ್ಟಿಕತೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿರುವುದನ್ನು ಸಮೀಕ್ಷೆ ವಿವರಿಸಿದೆ.

‘ಸಮೀಕ್ಷೆ ನಡೆದ 22 ರಾಜ್ಯಗಳ ಪೈಕಿ 20 ರಾಜ್ಯಗಳಲ್ಲಿನ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಿರುವುದು ಕಂಡು ಬಂದಿದೆ. ಸರ್ಕಾರ ಹೊಸದಾಗಿ ಆರಂಭಿಸಿರುವ ಮಿಷನ್‌ ಪೋಷಣ್‌ ಯೋಜನೆಯಡಿ, ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬೊಜ್ಜಿನ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ’ ಎಂದು ಸಮೀಕ್ಷೆ ತಂಡದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.