ನವದೆಹಲಿ: ‘ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ವೇಳೆ ಯಾವುದೇ ಒತ್ತಡ ಬೇಡ. ಇತರರು ಏನು ಮಾಡುತ್ತಿದ್ದಾರೆ ಎನ್ನುವ ಚಿಂತೆಯೂ ಬೇಡ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ಸಿದ್ಧತೆ ಮಾಡಿಕೊಂಡಿರುವುದರ ಬಗ್ಗೆಯಷ್ಟೇ ನಿಮ್ಮ ಗಮನವಿರಲಿ..’
ಹೀಗೆ ವಿದ್ಯಾರ್ಥಿಗಳಿಗೆ ಸರಣಿ ಸಲಹೆಗಳನ್ನು ನೀಡಿದ್ದು ಪ್ರಧಾನಿ ನರೇಂದ್ರ ಮೋದಿ.ಪರೀಕ್ಷೆಯ ಸಂದರ್ಭದಲ್ಲಿ ಆತಂಕ, ಸೋಲಿನ ಭೀತಿ ಹಾಗೂಪರೀಕ್ಷಾ ಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮಾನವ ಸಂಪನ್ಮೂಲ ಸಚಿವಾಲಯ ಆಯೋಜಿಸಿದ್ದ
‘ಪರೀಕ್ಷಾ ಪೆ ಚರ್ಚಾ 2020’ ಕಾರ್ಯಕ್ರಮದಲ್ಲಿ ಮೋದಿ, ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಸೋಮವಾರ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ರಾಜಸ್ತಾನ ಮೂಲದ ಯಶಶ್ರೀ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ, ಚಂದ್ರಯಾನದ ಹಿನ್ನಡೆಯನ್ನು ಉದಾಹರಣೆಯನ್ನಾಗಿರಿಸಿಕೊಂಡು ಮೋದಿ ಉತ್ತರಿಸಿದರು.
‘ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲಿದೆಯೇ ಇಲ್ಲವೇ ಎನ್ನುವುದರ ಖಚಿತತೆ ಇಲ್ಲದ ಕಾರಣ, ಅದನ್ನು ವೀಕ್ಷಿಸಲು ನಾನು ತೆರಳಬಾರದು ಎಂದು ನನಗೆ ಹೇಳಲಾಯಿತು. ಆದರೆ ನಾನು ಅಲ್ಲಿ ಇರಲೇಬೇಕಿತ್ತು. ಹಿನ್ನಡೆಯಾದರೆ ಯಶಸ್ಸು ಸಿಗುವುದೇ ಇಲ್ಲ ಎಂದರ್ಥವಲ್ಲ. ಒಮ್ಮೆಯ ಹಿನ್ನಡೆಯು ಗೆಲ್ಲುವ ಪ್ರಯತ್ನ ಮುಂದುವರಿಸುವ ಪ್ರೇರಣೆ ನೀಡಬೇಕು. ಸೋಲಿನಿಂದ ಗೆಲುವಿನ ಪಾಠ ಕಲಿಯಬೇಕು’ ಎಂದು ಸಲಹೆ ನೀಡಿದರು.
ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಸಾಲದು. ಪರೀಕ್ಷೆಯೇ ಎಲ್ಲ ಎನ್ನುವ ಮನೋಭಾವನೆಯಿಂದ ಹೊರಬರಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೋದಿ ಅವರು ಕಿವಿಮಾತು ಹೇಳಿದರು.
ಕ್ರಿಕೆಟ್ ಘಟನೆಗಳೂ ಪ್ರೇರಣೆ
ಸೋಲನ್ನೂ ಜೀವನದ ಒಂದು ಭಾಗವಾಗಿ ಸ್ವೀಕರಿಸಲು ಕಿವಿಮಾತು ಹೇಳಿದ ಮೋದಿ ಅವರು, ಕ್ರಿಕೆಟ್ ಘಟನೆಗಳನ್ನು ಉದಾಹರಣೆಯನ್ನಾಗಿ ನೀಡಿದರು. 2001ರಲ್ಲಿ ನಡೆದ ಭಾರತ–ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಲಿದೆ ಎನ್ನುವ ಸಂದರ್ಭದಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಜೊತೆಯಾಟವನ್ನು ಮರೆಯಲು ಸಾಧ್ಯವೆ? ಅದೇ ರೀತಿ ಗಾಯಗೊಂಡರೂ ಅನಿಲ್ ಕುಂಬ್ಳೆಬೌಲಿಂಗ್ ನಡೆಸಿದನ್ನು ಮರೆಯಲು ಸಾಧ್ಯವೆ? ಇದು ಪ್ರೇರಣೆ ಹಾಗೂ ಸಕಾರಾತ್ಮಕ ಯೋಚನೆಗಿರುವ ಉದಾಹರಣೆ ಎಂದರು.
ಮೋದಿ ನೀಡಿದ ಸಲಹೆಗಳು
*ಮನೆಯಲ್ಲಿ ಒಂದು ಕೋಣೆ ‘ಎಲೆಕ್ಟ್ರಾನಿಕ್ ಉಪಕರಣ’ ರಹಿತ ಕೋಣೆಯಾಗಿರಲಿ. ಈ ಕೋಣೆಗೆ ಪ್ರವೇಶಿಸುವವರು ಮೊಬೈಲ್, ಲ್ಯಾಪ್‌ಟಾಪ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ ಎನ್ನುವುದನ್ನು ಪಾಲಿಸಿ
* ಎಲ್ಲರೂ ನೂತನ ತಂತ್ರಜ್ಞಾನದ ಜ್ಞಾನವನ್ನು ಹೊಂದಿರಬೇಕು, ಆದರೆ ಈ ತಂತ್ರಜ್ಞಾನವು ನಿಮ್ಮ ಜೀವನವನ್ನು ನಿಯಂತ್ರಿಸದಂತೆ ಎಚ್ಚರವಹಿಸಬೇಕು
*ತಂತ್ರಜ್ಞಾನವನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು
* ತಂತ್ರಜ್ಞಾನ ನಮ್ಮ ಸಮಯವನ್ನು ಹಾಳು ಮಾಡದಂತೆ ಎಚ್ಚರಿಕೆ ವಹಿಸಬೇಕು
ಎಲ್ಲಾ ಶಾಲೆಗಳಿಗೆ ಮೋದಿಯ ‘ಎಕ್ಸಾಂ ವಾರಿಯರ್ಸ್’
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿಸುವ ಸಲುವಾಗಿ ಹೊರತಂದಿರುವ ‘ಎಕ್ಸಾಂ ವಾರಿಯರ್ಸ್’ ಪುಸ್ತಕದ ಕನ್ನಡ ರೂಪಾಂತರವನ್ನು ಎಲ್ಲ ಶಾಲೆಗಳಿಗೆ ಒದಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ರಾಜಾಜಿನಗರದ ಕೆಎಲ್‌ಇ ಶಾಲೆಯಲ್ಲಿಸೋಮವಾರ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಸುಮಾರು 500 ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡ ಅವರು ಕೊನೆಯಲ್ಲಿ ಈ ವಿಷಯ ತಿಳಿಸಿದರು.
‘ರಾಜ್ಯದಲ್ಲಿರುವ ಸುಮಾರು 52 ಸಾವಿರ ಶಾಲೆಗಳ ಎಲ್ಲಾ ಮಕ್ಕಳಿಗೂ ಈ ಪುಸ್ತಕ ಪೂರೈಸುವುದು ಸಾಧ್ಯವಾಗುತ್ತದೋ ಇಲ್ಲವೋ, ಒಂದೊಂದು ಶಾಲೆಗೆ ಒಂದೊಂದರಂತೆ ಕೃತಿ ಪೂರೈಸುವುದಂತೂ ಸಾಧ್ಯ, ಶಾಲೆಯಲ್ಲಿ ಈ ಪುಸ್ತಕವನ್ನು ವಿದ್ಯಾರ್ಥಿಗಳು ಓದಬಹುದಾಗಿದೆ’ ಎಂದರು.
ಅರ್ಧಕ್ಕರ್ಧ ಮಂದಿಗೆ ಅರೆಬರೆ ಅರ್ಥ: ಪ್ರಧಾನಿ ಅವರ ಸಂವಾದದ ಬಳಿಕ ಸಚಿವ ಸುರೇಶ್ ಕುಮಾರ್, ‘ಎಷ್ಟು ಮಂದಿಗೆ ಪ್ರಧಾನಿ ಅವರ ಸಲಹೆ ಪೂರ್ಣವಾಗಿ ಅರ್ಥವಾಯಿತು ಕೈಎತ್ತಿ’ ಎಂದು ಕೇಳಿದರು. ಸುಮಾರು ಅರ್ಧದಷ್ಟು ಮಂದಿ ಮಾತ್ರ ಕೈಎತ್ತಿದರು. ‘ಯಾರಿಗೆ ಅರೆಬರೆ ಅರ್ಥವಾಗಿದೆ ಕೈಎತ್ತಿ’ ಎಂದು ಕೇಳಿದಾಗ ಬಹುತೇಕ ಅಷ್ಟೇ ಮಂದಿ ಕೈ ಎತ್ತಿದರು. ಹೀಗಾಗಿ ಸಚಿವರು ಸುಮಾರು 10 ನಿಮಿಷಗಳ ಕಾಲ ಪ್ರಧಾನಿ ಅವರ ಸಂವಾದದ ಒಟ್ಟಾರೆ ಸಾರಾಂಶವನ್ನು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.