ನವದೆಹಲಿ: ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಸದನದಲ್ಲಿ ಸತತವಾಗಿ ಗದ್ದಲ ಮಾಡುವ ಮೂಲಕ ಕಲಾಪಗಳು ನಡೆಯದಂತೆ ಮಾಡುತ್ತಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿ ಮಾಡುತ್ತಿವೆ. ಈಗಾಗಲೇ ಸದನದ ಸಾಕಷ್ಟು ಸಮಯವನ್ನು ವ್ಯರ್ಥಮಾಡಿವೆ. ಅವರು ಕಲಾಪಕ್ಕೆ ಅಡ್ಡಿ ಮಾಡಿದರೂ, ಸರ್ಕಾರವು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಹೊಸ ಮಸೂದೆಗಳನ್ನು ಮಂಡಿಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿರೋಧ ಪಕ್ಷಗಳಿಗೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸುವ ಆಸಕ್ತಿಯಿಲ್ಲ. ಪ್ರತಿದಿನವೂ ಒಂದೇ ವಿಷಯದ ಕುರಿತಾಗಿ ಚರ್ಚಿಸಲು ಒತ್ತಾಯಿಸುವ ಮೂಲಕ ದೇಶದ ಹಾಗೂ ಸಂಸತ್ತಿನ ಸಮಯವನ್ನು ಹಾಳು ಮಾಡುತ್ತಿವೆ. ಆದರೆ, ಸರ್ಕಾರವು ಹೊಸ ಮಸೂದೆಗಳ ಕುರಿತು ಚರ್ಚಿಸಲು ಬಯಸುತ್ತಿದೆ ಎಂದಿದ್ದಾರೆ.
ಸರ್ಕಾರವು ಆದಾಯ ತೆರಿಗೆ ಮಸೂದೆ, ರಾಷ್ಟ್ರೀಯ ಕ್ರೀಡಾ ಮಸೂದೆ, ಮಣಿಪುರ ಸರಕು ಹಾಗೂ ಸೇವಾ ತೆರಿಗೆ ಮಸೂದೆ(ತಿದ್ದುಪಡಿ) ಸೇರಿದಂತೆ ಹಲವು ಪ್ರಮುಖ ಮಸೂದೆಗಳ ಮಂಡನೆಗೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಜುಲೈ 21 ರಿಂದ ಮುಂಗಾರು ಅಧಿವೇಶನ ಆರಂಭವಾಗಿದೆ. ವಿರೋಧ ಪಕ್ಷಗಳು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಬಿಹಾರದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತು ಚರ್ಚೆಗೆ ಒತ್ತಾಯಿಸಿ ಸತತವಾಗಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ಕಲಾಪವನ್ನು ಪದೇ ಪದೇ ಮುಂದೂಡಿಕೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.