ADVERTISEMENT

ವಿಪಕ್ಷಗಳಿಂದ ಸಭಾತ್ಯಾಗ: ಕಡಲತೀರ ಖನಿಜಗಳ ಗಣಿಗಾರಿಕೆ ಗುತ್ತಿಗೆ– ಮಸೂದೆ ಅಂಗೀಕಾರ

50 ವರ್ಷಗಳ ಗುತ್ತಿಗೆಗೆ ಅವಕಾಶ * ವಿಪಕ್ಷಗಳ ಸದಸ್ಯರಿಂದ ಸಭಾತ್ಯಾಗ

ಪಿಟಿಐ
Published 3 ಆಗಸ್ಟ್ 2023, 13:07 IST
Last Updated 3 ಆಗಸ್ಟ್ 2023, 13:07 IST
ಪ್ರಲ್ಹಾದ ಜೋಶಿ 
ಪ್ರಲ್ಹಾದ ಜೋಶಿ    

ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರ ವಿಚಾರವಾಗಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ಮಧ್ಯೆಯೇ, ಕಡಲ ತೀರದಲ್ಲಿನ ಖನಿಜಗಳ ಅನ್ವೇಷಣೆ, ಗಣಿಗಾರಿಕೆಗೆ 50 ವರ್ಷಗಳ ಕಾಲ ಗುತ್ತಿಗೆ ನೀಡುವುದಕ್ಕೆ ಅವಕಾಶ ಕಲ್ಪಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು.

ಭೋಜನ ವಿರಾಮದ ನಂತರ ಕಲಾಪ ಆರಂಭಗೊಂಡಾಗ ಮಣಿಪುರದಲ್ಲಿನ ಪರಿಸ್ಥಿತಿಯನ್ನು ಮತ್ತೆ ಪ್ರಸ್ತಾಪಿಸಿದ ವಿರೋಧ ಪಕ್ಷಗಳ ಸದಸ್ಯರು, ಕಣಿವೆ ರಾಜ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದರು.

ಈ ಗದ್ದಲ ನಡುವೆಯೇ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ‘ಕಡಲತೀರದ ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2023’ ಮಂಡಿಸಿದರು.

ADVERTISEMENT

ಕಡಲ ಕಿನಾರೆಯಲ್ಲಿ ಲಭ್ಯವಿರುವ ಖನಿಜಗಳ ಅನ್ವೇಷಣೆ, ಅವುಗಳ ಅಭಿವೃದ್ಧಿ ಹಾಗೂ ಹರಾಜಿಗೆ ಈ ಮಸೂದೆ ಅವಕಾಶ ಒದಗಿಸುತ್ತದೆ. ಈ ಗುತ್ತಿಗೆಯನ್ನು ಸ್ಪರ್ಧಾತ್ಮಕ ಬಿಡ್ಡಿಂಗ್‌ ಪ್ರಕ್ರಿಯೆ ಮೂಲಕ ಖಾಸಗಿ ವಲಯಕ್ಕೂ ನೀಡುವ ಅವಕಾಶವನ್ನು ಒದಗಿಸುತ್ತದೆ.

‘ಗುತ್ತಿಗೆ ಪಡೆದ ನಂತರ, ಖನಿಜಗಳ ಉತ್ಪಾದನೆ ಮತ್ತು ಸಾಗಣೆಗೆ ನಾಲ್ಕು ವರ್ಷಗಳ ಸಮಯಾವಕಾಶ ಒದಗಿಸಲಾಗುತ್ತದೆ. ಉತ್ಪಾದನೆ ಮತ್ತು ಸಾಗಣೆ ಕಾರ್ಯ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಅದನ್ನು ಪುನಃ ಆರಂಭಿಸುವ ಸಲುವಾಗಿ ಮತ್ತೆ ಎರಡು ವರ್ಷಗಳ ಅವಕಾಶ ನೀಡುವ ಉದ್ದೇಶವನ್ನೂ ಈ ಮಸೂದೆ ಒಳಗೊಂಡಿದೆ.

ಅಣುಶಕ್ತಿ ಕ್ಷೇತ್ರದಲ್ಲಿ ಬಳಸುವ ಖನಿಜಗಳ ಅನ್ವೇಷಣೆ ಅಥವಾ ಉತ್ಪಾದನೆಯ ಪರವಾನಗಿಯನ್ನು ಸರ್ಕಾರಿ ಇಲ್ಲವೇ ಸರ್ಕಾರದ ಅಧೀನದ ನಿಗಮಕ್ಕೆ ಮಾತ್ರ ನೀಡುವ ಅಂಶವೂ ಮಸೂದೆಯಲ್ಲಿದೆ.

ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.