ಪಿಯೂಷ್ ಗೋಯಲ್
ಪಿಟಿಐ ಚಿತ್ರ
ನವದೆಹಲಿ: ವಿರೋಧ ಪಕ್ಷಗಳು ಸಂಸತ್ತಿನ ಕಲಾಪಗಳು ನಡೆಯದಂತೆ ತಡೆಯುತ್ತಿರುವುದು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರು ಕೆಡಿಸಲು ಪ್ರಯತ್ನಿಸುತ್ತಿರುವುದು 'ದುರದೃಷ್ಟಕರ' ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ.
ಅದಾನಿ ಸಮೂಹದ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳು ಸೇರಿದಂತೆ ವಿವಿಧ ವಿಚಾರಗಳ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಪಟ್ಟು ಹಿಡಿದಿವೆ. ಹೀಗಾಗಿ, ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪಗಳನ್ನು ಎರಡೂ ಸದನಗಳಲ್ಲಿ ಮೂರನೇ ದಿನವೂ ಮುಂದೂಡಲಾಗಿದೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಗೋಯಲ್, 'ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಇಂಧನ ಕ್ಷೇತ್ರದ ಸುಧಾರಣೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಳೆದ 10 ವರ್ಷಗಳಲ್ಲಿ ಹಲವು ರೀತಿಯ ಉಪಕ್ರಮಗಳನ್ನು ಕೈಗೊಂಡಿದೆ' ಎಂದು ಹೇಳಿದ್ದಾರೆ.
'ಎನ್‌ಡಿಎ ಸರ್ಕಾರದ ಎಲ್ಲ ಸುಧಾರಣಾ ಕ್ರಮಗಳನ್ನು ಕಡೆಗಣಿಸುತ್ತಿರುವ ವಿರೋಧ ಪಕ್ಷಗಳು, ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಭಾರತದ ಹೆಸರು ಕೆಡಿಸುವ ಕೆಲಸ ಮುಂದುವರಿಸಿವೆ. ಹಾಗೆಯೇ, ಸಂಸತ್ತಿನ ಕಲಾಪಗಳು ನಡೆಯಲು ಬಿಡುತ್ತಿಲ್ಲ. ಇದು ದುರದೃಷ್ಟಕರ' ಎಂದು ಟೀಕಿಸಿದ್ದಾರೆ.
'ನಕಾರಾತ್ಮ ಚಿಂತನೆಗಳಿಂದ ಕೂಡಿದ್ದ ಕಾಲ ಮುಗಿದುಹೋಗಿವೆ. ಇದೀಗ, ಆಕಾಂಕ್ಷೆಗಳನ್ನು ಹೊತ್ತ ಯುವ ಭಾರತವು ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.