ನವದೆಹಲಿ: ಕ್ಷಮೆಯಾಚಿಸಿದರೆ 12 ಮಂದಿ ರಾಜ್ಯಸಭಾ ಸಂಸದರ ಅಮಾನತನ್ನು ವಾಪಸ್ ಪಡೆಯಲು ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಸಂಸದರ ಅಮಾನತು ನಿರ್ಧಾರ ವಾಪಸ್ ಪಡೆಯುವಂತೆ ಪ್ರತಿಪಕ್ಷಗಳಿಂದ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
‘ಸಂಸದರನ್ನು ಯಾಕೆ ಅಮಾನತು ಮಾಡಲಾಗಿದೆ ಎಂಬುದನ್ನು ನಾವು ವಿವರಿಸಿದ್ದೇವೆ. ಏನು ನಡೆದಿತ್ತು ಎಂಬುದಕ್ಕೆ ದೇಶವೇ ಸಾಕ್ಷಿಯಾಗಿದೆ. ಅದು ದಾಖಲೆಗಳಲ್ಲಿಯೂ ಇದೆ. ಇವತ್ತಾದರೂ ಸರಿ, ಅವರು ಕ್ಷಮೆ ಯಾಚಿಸಿದರೆ ಅಮಾನತು ನಿರ್ಧಾರ ವಾಪಸ್ ಪಡೆಯಲು ಸಿದ್ಧರಿದ್ದೇವೆ’ ಎಂದು ಜೋಶಿ ಹೇಳಿದ್ದಾರೆ.
ಈ ಮಧ್ಯೆ, ಸಂಸದರ ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಮಂಗಳವಾರವೂ ಸಂಸತ್‌ನಲ್ಲಿ ಧರಣಿ ನಡೆಸಿವೆ. ಈ ವಿಚಾರವಾಗಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಮಧ್ಯಾಹ್ನ 1 ಗಂಟೆಗೆ ಪ್ರತಿಪಕ್ಷಗಳ ನಾಯಕರು ಸಭೆ ಸೇರಲಿದ್ದಾರೆ.
ಅಮಾನತುಗೊಂಡ 12 ಮಂದಿ ರಾಜ್ಯಸಭಾ ಸಂಸದರಲ್ಲಿ ಕಾಂಗ್ರೆಸ್‌ನ ಆರು, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನಾದ ತಲಾ ಇಬ್ಬರು, ಸಿಪಿಐ ಮತ್ತು ಸಿಪಿಎಂನ ತಲಾ ಒಬ್ಬರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.