ಸಾಂದರ್ಭಿಕ ಚಿತ್ರ
ಚೆನ್ನೈ: ತಮಿಳುನಾಡಿನ ವಿಲ್ಲುಪುರಂನಿಂದ ಪುದುಚೇರಿಗೆ ಹೊರಟಿದ್ದ ಮೆಮು ಪ್ಯಾಸೆಂಜರ್ ರೈಲಿನ ಒಂದು ಭೋಗಿ ಇಂದು (ಮಂಗಳವಾರ) ವಿಲ್ಲುಪುರಂ ಬಳಿ ಹಳಿ ತಪ್ಪಿದ್ದು, ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂದು ಬೆಳಿಗ್ಗೆ 5.25ರ ಸುಮಾರಿಗೆ ವಿಲ್ಲುಪುರಂ–ಪುದುಚೇರಿ ಮೆಮು ಪ್ಯಾಸೆಂಜರ್ ರೈಲು ಹೊರಟಿತ್ತು. ಸರಿಸುಮಾರು 500 ಪ್ರಯಾಣಿಕರು ರೈಲಿನಲ್ಲಿದ್ದರು. ರೈಲು ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ಬಳಿಕ ವಕ್ರರೇಖೆ ದಾಟುತ್ತಿದ್ದ ವೇಳೆ ರೈಲಿನ ಒಂದು ಭೋಗಿ ಹಳಿತಪ್ಪಿತು. ಇದನ್ನು ಗಮನಿಸಿದ ಲೊಕೊ ಪೈಲಟ್ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ. ರೈಲು ಹಳಿತಪ್ಪಲು ಕಾರಣ ಏನೆಂಬುದು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತಿಳಿಯಲಿದೆ. ರೈಲು ಹಳಿ ತಪ್ಪಿದ್ದರಿಂದ ವಿಲ್ಲುಪುರಂ ಮಾರ್ಗದಲ್ಲಿ ಬೆಳಿಗ್ಗೆ 8.30ರವರೆಗೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸಂಚಾರವನ್ನು ಪುನರಾರಂಭಿಸಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.