ADVERTISEMENT

ಅಂಗಾಂಗ ಕಸಿ | ಯಾವುದೇ ರಾಜ್ಯದಲ್ಲಿ ನೋಂದಣಿಗೆ ಅವಕಾಶ: ಸಚಿವೆ ಭಾರತಿ ಪವಾರ್‌

‘ಒಂದು ದೇಶ–ಒಂದು ನೀತಿ’ಯಡಿ ಕ್ರಮ

ಪಿಟಿಐ
Published 14 ಮಾರ್ಚ್ 2023, 13:12 IST
Last Updated 14 ಮಾರ್ಚ್ 2023, 13:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಾಗಿ ರೋಗಿಗಳು ಯಾವುದೇ ರಾಜ್ಯದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಅಲ್ಲದೇ, ಕಸಿಗಾಗಿ ಮೃತವ್ಯಕ್ತಿಯ ಅಂಗಾಂಗ ಪಡೆದುಕೊಳ್ಳಲು ನೋಂದಣಿ ಮಾಡಿಸಿಕೊಳ್ಳುವವರಿಗೆ ಗರಿಷ್ಠ ವಯೋಮಿತಿ 65 ವರ್ಷ ಎಂದು ನಿಗದಿ ಮಾಡಲಾಗಿತ್ತು. ಹೊಸ ಮಾರ್ಗಸೂಚಿಗಳಡಿ ಈ ವಯೋಮಿತಿಯನ್ನು ಸಹ ರದ್ದು‍ಪಡಿಸಲಾಗಿದೆ.

ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಅವರು, ಅಂಗಾಂಗ ಕಸಿ ಮಾಡಿಕೊಳ್ಳುವ ರೋಗಿಗಳು ಆಯಾ ರಾಜ್ಯಗಳಲ್ಲಿಯೇ ವಾಸಿಸುತ್ತಿರಬೇಕು ಎಂಬ ನಿಬಂಧನೆಯನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

‘ಅಂಗಾಂಗ ದಾನ ಹಾಗೂ ಕಸಿಗೆ ಸಂಬಂಧಿಸಿ ಸರ್ಕಾರವು ಒಂದು ದೇಶ–ಒಂದು ನೀತಿ ಎಂಬ ಉದ್ದೇಶದೊಂದಿಗೆ ಕಾರ್ಯಕ್ರಮ ರೂಪಿಸಿದೆ. ಈ ಸಂಬಂಧ ಎಲ್ಲ ರಾಜ್ಯಗಳೊಂದಿಗೆ ಸಮಲೋಚನೆಯನ್ನೂ ನಡೆಸಿದೆ’ ಎಂದು ಅವರು ಹೇಳಿದ್ದಾರೆ.

ಸರ್ಕಾರವು ‘ಮಾನವ ಅಂಗಾಂಗಗಳು ಹಾಗೂ ಅಂಗಾಂಶಗಳ ಕಸಿ ಕಾಯ್ದೆ, 1994’ ರಚಿಸಿದ್ದು, ಅದರಂತೆ ‘ಮಾನವ ಅಂಗಾಂಗಗಳು ಹಾಗೂ ಅಂಗಾಂಶಗಳ ಕಸಿ ನಿಯಮಗಳು, 2014’ ಕುರಿತು ಅಧಿಸೂಚನೆ ಹೊರಡಿಸಿದೆ ಎಂದು ಸಚಿವೆ ಭಾರತಿ ಪ್ರವೀಣ್ ಪವಾರ್ ಹೇಳಿದ್ದಾರೆ.

‘ಈ ಕಾಯ್ದೆ ಹಾಗೂ ನಿಯಮಗಳು ಆಂಧ್ರಪ್ರದೇಶ, ತೆಲಂಗಾಣ, ಉತ್ತರಾಖಂಡ, ಕರ್ನಾಟಕ, ಮೇಘಾಲಯ ಹಾಗೂ ತ್ರಿಪುರಾ ಹೊರತುಪಡಿಸಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿವೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.