ADVERTISEMENT

ಕಾಶ್ಮೀರ ವಿಚಾರ ಸಂಬಂಧ ಮತ್ತೆ ಮೂಗು ತೂರಿಸಿದ ಪಾಕ್‌

ಪಿಟಿಐ
Published 23 ಸೆಪ್ಟೆಂಬರ್ 2023, 15:22 IST
Last Updated 23 ಸೆಪ್ಟೆಂಬರ್ 2023, 15:22 IST
   

ವಿಶ್ವಸಂಸ್ಥೆ: ‘ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಕ್‌ ಭಾರತದ ಅವಿಭಾಜ್ಯ ಅಂಗವಾಗಿವೆ. ಇವುಗಳ ಸಮಸ್ಯೆಯು ದೇಶದ ಆಂತರಿಕ ವಿಷಯವಾಗಿದ್ದು ಪಾಕಿಸ್ತಾನವು ಸುಖಾಸುಮ್ಮನೆ ಮೂಗು ತೂರಿಸುವ ಅಗತ್ಯವಿಲ್ಲ’ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ, ಭಾರತವು ತಿರುಗೇಟು ನೀಡಿದೆ.

ಶುಕ್ರವಾರ ನಡೆದ ಉನ್ನತಮಟ್ಟದ 78ನೇ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪಾಕ್‌ನ ಹಂಗಾಮಿ ಪ್ರಧಾನಿ ಅನ್ವರ್‌ ಉಲ್‌ ಹಕ್‌ ಕಾಕರ್ ಅವರು, ಕಾಶ್ಮೀರ ಸಮಸ್ಯೆ ಕುರಿತು ಪ್ರಸ್ತಾಪಿಸಿದರು.

‘ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳ ಜೊತೆಗೆ ಶಾಂತಿಯುತ ಹಾಗೂ ಫಲಪ್ರದಕಾರಿಯಾದ ಬಾಂಧವ್ಯ ಹೊಂದುವುದು ನಮ್ಮ ಆಸೆಯಾಗಿದೆ. ಎರಡೂ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಕಾಶ್ಮೀರ ವಿಷಯವು ಕೀಲಿಕೈ ಆಗಿದೆ’ ಎಂದರು.

ADVERTISEMENT

ವಿಶ್ವಸಂಸ್ಥೆಯಲ್ಲಿನ ಭಾರತದ ಕಾರ್ಯದರ್ಶಿ ಪೆಟಲ್‌ ಗಹಲೋಟ್‌ ಅವರು ಸಭೆಯಲ್ಲಿಯೇ ಪ್ರಧಾನಿ ಕಾಕರ್‌ಗೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

‘ಪಾಕಿಸ್ತಾನವು ಇಡೀ ವಿಶ್ವದಲ್ಲಿಯೇ ಭಯೋತ್ಪಾದಕರು ನೆಲೆಯೂರಿರುವ ಅತಿದೊಡ್ಡ ದೇಶವಾಗಿದೆ. ಅಲ್ಲದೇ, ಭಯೋತ್ಪಾದನೆಯ ಪೋಷಕ ರಾಷ್ಟ್ರವೂ ಆಗಿದೆ. 26/11ರ ಮುಂಬೈ ದಾಳಿ ನಡೆದು 15 ವರ್ಷಗಳಾಗಿವೆ. ಇಂದಿಗೂ ಸಂತ್ರಸ್ತರು ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ದಾಳಿಯಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದೆ ಕುತರ್ಕ ವಾದದಲ್ಲಿ ಮುಳುಗಿದೆ’ ಎಂದು ಚಾಟಿ ಬೀಸಿದರು.

‘ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಪಾಕ್‌ನಲ್ಲಿ ಅತಿಹೆಚ್ಚು ಮಾನವ ಹಕ್ಕುಗಳನ್ನು ಉಲ್ಲಂಘನೆಯಾಗುತ್ತಿದೆ. ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಹಕ್ಕುಗಳಿಗೆ ಅಲ್ಲಿ ಬೆಲೆ ಇಲ್ಲದಂತಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದತ್ತ (ಭಾರತ) ಬೆರಳು ತೋರಿಸುವ ಮೊದಲು ತನ್ನ ಮನೆಯಲ್ಲಿನ (ಪಾಕ್‌) ಸಮಸ್ಯೆ ಬಗ್ಗೆ ಗಮನಹರಿಸುವುದು ಒಳಿತು’ ಎಂದು ಹೇಳಿದರು.

ವೇದಿಕೆ ದುರ್ಬಳಕೆ:

ಭಾರತದ ವಿರುದ್ಧ ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿ ಅಪಪ್ರಚಾರ ಮಾಡುವುದು ಪಾಕ್‌ನ ಚಾಳಿಯಾಗಿದೆ. ವಿಶ್ವಸಂಸ್ಥೆಯ ವೇದಿಕೆಯನ್ನು ಇದಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಭಾರತ ಟೀಕಿಸಿದೆ.

‘ಪಾಕ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಅವ್ಯಾಹತವಾಗಿದೆ. ಈ ವಿಷಯದಿಂದ ಅಂತರರಾಷ್ಟ್ರೀಯ ಸಮುದಾಯದ ಗಮನವನ್ನು ಬೇರೆಡೆ ತಿರುಗಿಸಲು ಯತ್ನಿಸುತ್ತಿದೆ. ಈ ತಂತ್ರಗಾರಿಕೆಯು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಹಾಗೂ ಬಹುಪಕ್ಷೀಯ ಸಂಸ್ಥೆಗಳಿಗೂ ಗೊತ್ತಿದೆ’ ಎಂದು ಪೆಟಲ್‌ ಹೇಳಿದರು.

ಶಾಂತಿ ಕಾಪಾಡಲು ತಾಕೀತು ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಗೊಳ್ಳಲು ಪಾಕ್‌ ಕಡ್ಡಾಯವಾಗಿ ಈ ಮೂರು ಕ್ರಮಗಳನ್ನು ಪಾಲಿಸಬೇಕಿದೆ ಎಂದು ಭಾರತ ತಾಕೀತು ಮಾಡಿದೆ.

  • ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಕೈಬಿಡಬೇಕು ಹಾಗೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು 

  • ಅನಧಿಕೃತ ಹಾಗೂ ಬಲವಂತದಿಂದ ಆಕ್ರಮಿಸಿಕೊಂಡಿರುವ ಭಾರತದ ಭೂಪ್ರದೇಶವನ್ನು ತೊರೆಯಬೇಕು

  • ಪಾಕ್‌ನಲ್ಲಿರುವ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸುವುದನ್ನು ಸ್ಥಗಿತಗೊಳಿಸಬೇಕು

ಪ್ರತಿವರ್ಷ ಸಾವಿರ ಮಹಿಳೆಯರ ಮತಾಂತರ
ಪ್ರತಿವರ್ಷವು ಪಾಕ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಂದಾಜು ಒಂದು ಸಾವಿರ ಮಹಿಳೆಯರ ಅಪಹರಣ ಬಲವಂತದ ಮತಾಂತರ ಹಾಗೂ ಮದುವೆ ಮಾಡಲಾಗುತ್ತಿದೆ ಎಂದು ಅಲ್ಲಿನ ಸರ್ಕಾರಿ ನಿಯಂತ್ರಣದ ಮಾನವ ಹಕ್ಕುಗಳ ಆಯೋಗದ ವರದಿ ಬಹಿರಂಗಪಡಿಸಿದೆ. ಸಭೆಯಲ್ಲಿ ಪೆಟಲ್‌ ಅವರು ಈ ವರದಿಯನ್ನು ಪ್ರಸ್ತಾಪಿಸಿದರು. ಆಗಸ್ಟ್‌ನಲ್ಲಿ ಫೈಸಲಾಬಾದ್ ಜಿಲ್ಲೆಯ ಜರನ್ವಾಲಾದಲ್ಲಿ ಕ್ರಿಶ್ಚಿಯನ್‌ ಸಮುದಾಯದ ಮೇಲೆ ನಡೆದ ಪಾಶವೀ ಕೃತ್ಯವನ್ನೂ ಉಲ್ಲೇಖಿಸಿದರು.  ಒಟ್ಟು 19 ಚರ್ಚ್‌ಗಳು ಹಾಗೂ 89 ಕ್ರಿಶ್ಚಿಯನ್‌ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದ ಅವರು ಅಹ್ಮದೀಯರ ಪ್ರಾರ್ಥನಾ ಸ್ಥಳಗಳನ್ನು ನೆಲಸಮಗೊಳಿಸಿರುವುದನ್ನು ಪ್ರಸ್ತಾಪಿಸಿದರು. ‘ಅಲ್ಲಿ ಹಿಂದೂ ಸಿಖ್‌ ಹಾಗೂ ಕ್ರಿಶ್ಚಿಯನ್‌ ಸಮುದಾಯದ ಮಹಿಳೆಯರ ಬದುಕು ತೀರಾ ಶೋಚನೀಯವಾಗಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.