ಪವನ್ ಕಲ್ಯಾಣ್
ಅಮರಾವತಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪರವಾಗಿ ಮಾತನಾಡುವುದು ಸ್ವೀಕಾರಾರ್ಹವಲ್ಲ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು ಇಂತಹ ಹಿಂಸಾಚಾರಗಳನ್ನು ಸಮರ್ಥಿಸಿಕೊಳ್ಳುವ ಕೆಲವು ನಾಯಕರು ಭಾರತವನ್ನು ತೊರೆದು ಪಾಕಿಸ್ತಾನದಲ್ಲಿ ನೆಲಸಬೇಕೆಂದು ಪವನ್ ಹೇಳಿದ್ದಾರೆ.
'ಕಾಶ್ಮೀರ ನಮ್ಮದು. ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯ ಬಗ್ಗೆ ಮಾತನಾಡುವುದು ನಾಚಿಕೆಗೇಡಿನ ಸಂಗತಿ. ಕೋಮು ಹಿಂಸಾಚಾರವನ್ನು ತೊಲಗಿಸಲು ರಾಷ್ಟ್ರೀಯ ಏಕತೆ ಹಾಗೂ ಕಠಿಣ ಕ್ರಮಗಳು ಅತ್ಯಗತ್ಯ' ಎಂದು ಕಲ್ಯಾಣ್ ಯಾವುದೇ ನಾಯಕರ ಹೆಸರನ್ನು ಉಲ್ಲೇಖಿಸದೆ ಕಿಡಿಕಾರಿದ್ದಾರೆ.
ದೇಶ ವಿರೋಧಿಸುವ ಅಥವಾ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವ ವ್ಯಕ್ತಿಗಳನ್ನು ರಾಷ್ಟ್ರ ಸಹಿಸುವುದಿಲ್ಲ. ಪಹಲ್ಗಾಮ್ ದಾಳಿಯಿಂದಾಗಿ ದೇಶ ನೋವಿನಲ್ಲಿದೆ. ಇಂತಹ ಸಂದರ್ಭದಲ್ಲಿ ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಪವನ್ ಹೇಳಿದ್ದಾರೆ.
ಈ ದಾಳಿಯಲ್ಲಿ ಆಂಧ್ರಪ್ರದೇಶದ ಜೆ.ಎಸ್. ಚಂದ್ರ ಮೌಳಿ ಅವರ ತಲೆಗೆ 30ರಿಂದ 40 ಗುಂಡುಗಳನ್ನು ಹಾರಿಸಿ, ಕೊಲ್ಲಲಾಗಿದೆ. ಹಿಂದೂಗಳಿಗೆ ಇರುವುದು ಒಂದೇ ದೇಶ ಭಾರತ. ಹಿಂದೂಗಳು ಮತ್ತೆಲ್ಲಿಗೆ ಹೋಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.