ADVERTISEMENT

ಬಿಜೆಪಿ ಹನಿಟ್ರ್ಯಾಪ್ ಮಾಡಿ 2022ರಲ್ಲಿ ಎಂವಿಎ ಸರ್ಕಾರವನ್ನು ಉರುಳಿಸಿತು: ಸಾಮ್ನಾ

ರಹಸ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಶಾಸಕರು:

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 11:35 IST
Last Updated 22 ಜುಲೈ 2025, 11:35 IST
<div class="paragraphs"><p>ಹನಿಟ್ರ್ಯಾಪ್</p></div>

ಹನಿಟ್ರ್ಯಾಪ್

   

ಮುಂಬೈ: ಮಹಾ ವಿಕಾಸ್‌ ಆಘಾಡಿಯ (ಎಂವಿಎ) ಶಾಸಕರು ಹಾಗೂ ಸಂಸದರನ್ನು ಮಧುಬಲೆಯೊಳಗೆ ಸಿಲುಕಿಸಿದ್ದರಿಂದಲೇ 2022ರಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಪತನಗೊಂಡಿತು ಎಂದು ಶಿವಸೇನೆ (ಯುಬಿಟಿ) ಮಂಗಳವಾರ ಆರೋಪಿಸಿದೆ.

ಶಾಸಕರನ್ನು– ಸಂಸದರನ್ನು ಮಧುಬಲೆಯೊಳಗೆ ಬೀಳಿಸಲಿಕ್ಕಾಗಿಯೇ ರಹಸ್ಯ ಕ್ಯಾಮೆರಾಗಳು ಹಾಗೂ ಪೆಗಾಸಸ್ ತರಹದ ಕಣ್ಗಾವಲು ವ್ಯವಸ್ಥೆಯನ್ನು ಬಳಸಲಾಗಿದೆ ಎಂದಿದೆ.

ADVERTISEMENT

ಅವಿಭಜಿತ ಶಿವಸೇನೆ ಮತ್ತು ಎನ್‌ಸಿಪಿಯ ಕೆಲವು ಶಾಸಕರು ಕೇಂದ್ರದ ತನಿಖಾ ಸಂಸ್ಥೆಗಳ ಒತ್ತಡದಿಂದಾಗಿಯೇ ತಮ್ಮ ನಿಷ್ಠೆಯನ್ನು ಬದಲಿಸಿದರು. ಕನಿಷ್ಠ 18 ಶಾಸಕರು ಹಾಗೂ ನಾಲ್ವರು ಸಂಸದರು ಮಧುಬಲೆಯೊಳಗೆ ಸಿಲುಕಿದ್ದು, ಇದರಿಂದ ಪಾರಾಗಲಿಕ್ಕಾಗಿಯೇ ಬಿಜೆಪಿ ಜೊತೆ ಕೈ ಜೋಡಿಸಿದರು ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.

ಸಂಸದರು ಹಾಗೂ ಶಾಸಕರನ್ನು ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ ಎಂಬ ವಿಧಾನಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ವಿಜಯ್‌ ವಾಡೆಟ್ಟಿವಾರ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದೆ.

ಮಧುಬಲೆಯ ಜಾಲವನ್ನು ಹೊಂದಿರುವ ಬಿಜೆಪಿಯು, ಶಿವಸೇನೆಯ ಸಂಸದರು, ಶಾಸಕರಿದ್ದ ‘ಪೆನ್‌ಡ್ರೈವ್‌’ ಒಂದನ್ನು ಏಕನಾಥ ಶಿಂದೆ ಅವರಿಗೆ ನೀಡುತ್ತಿದ್ದಂತೆ, ಅವರು ಸೂರತ್‌, ಗುವಾಹಟಿ ನಂತರ ಗೋವಾಕ್ಕೆ ಪ್ರಯಾಣಿಸಿದರು. ಇದೆಲ್ಲವೂ ರೋಮಾಂಚನ ಕಥಾನಕ ಇದ್ದಂತಿದೆ ಎಂದು ಉಲ್ಲೇಖಿಸಿದೆ.

ಏಕನಾಥ ಶಿಂದೆ ಅವರಿಗೆ ಶಾಸಕರ ಬೆಂಬಲವಿರಲಿಲ್ಲ. ಪೊಲೀಸರು ಹಾಗೂ ಆಗ ವಿರೋಧ ಪಕ್ಷದ ನಾಯಕರಾಗಿದ್ದ ದೇವೇಂದ್ರ ಫಡಣವೀಸ್‌ ಅವರ ಬ್ಲ್ಯಾಕ್‌ಮೇಲ್‌ನಿಂದಲೇ ಶಾಸಕರ ಸಂಖ್ಯೆ ಹೆಚ್ಚಿತು ಎಂದಿದೆ.

ಶಿವಸೇನೆಯ ಸಚಿವರಾದ ಸಂಜಯ್‌ ಶಿರ್ಸಾಟ್‌, ಯೋಗೇಶ್‌ ಕದಂ, ದಾದಾ ಭೂಸೆ ಹಾಗೂ ಎನ್‌ಸಿಪಿಯ ಮಾಣಿಕ್‌ ಕೊಕಟೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಸಂಪಾದಕೀಯ ಹೇಳಿದೆ.

ಕೆಲವು ಸಚಿವರು ಮಧುಬಲೆಯೊಳಗೆ ಸಿಲುಕಿದ್ದು, ಅವರು ಸಹ ಸಂಪುಟದಿಂದ ಹೊರಹೋಗಬೇಕಾಗುತ್ತದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.