ADVERTISEMENT

ಭಯೋತ್ಪಾದನೆ ಕೊನೆಗೊಳಿಸಿ, ಇಲ್ಲವೇ ಭಾರತದ ಗುಂಡು ಎದುರಿಸಿ: ಪಾಕ್ ಜನರಿಗೆ ಮೋದಿ

ಪಿಟಿಐ
Published 26 ಮೇ 2025, 16:14 IST
Last Updated 26 ಮೇ 2025, 16:14 IST
   

ಭುಜ್: ಪಾಕಿಸ್ತಾನದ ಜನರು ತಮ್ಮ ಸರ್ಕಾರ ಮತ್ತು ಸೈನ್ಯವು ಸ್ವಂತ ಲಾಭಕ್ಕಾಗಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಅವರು ತಮ್ಮ ಜೀವನವನ್ನು ಹಾಳುಮಾಡುತ್ತಿರುವ ಬೆದರಿಕೆಯನ್ನು ಕೊನೆಗೊಳಿಸಲು ಮುಂದೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯಾದ ಆಪರೇಷನ್ ಸಿಂಧೂರದ ನಂತರ ಗುಜರಾತ್‌ಗೆ ತಮ್ಮ ಮೊದಲ ಭೇಟಿಯ ಸಂದರ್ಭ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಜನರು ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳದಿದ್ದರೆ, ಅವರು ಭಾರತೀಯ ಸೇನೆಯ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸೋಮವಾರ (ಮೇ 26) ಅಧಿಕಾರಕ್ಕೆ ಬಂದು 11 ವರ್ಷ ಪೂರೈಸಿದ ಪ್ರಧಾನಿ ಮೋದಿ, ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿರುವುದನ್ನು ಒತ್ತಿ ಹೇಳಿದರು. ಪಾಕಿಸ್ತಾನದ ನಾಗರಿಕರು ತಮ್ಮ ದೇಶ ಎತ್ತ ಸಾಗುತ್ತಿದೆ ಎಂದು ಯೋಚಿಸುವಂತೆ ಕೇಳಿಕೊಂಡರು.

ADVERTISEMENT

ಭಾರತ ಪ್ರವಾಸೋದ್ಯಮವನ್ನು ನಂಬುತ್ತದೆ. ಆದರೆ, ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರವಾಸೋದ್ಯಮವೆಂದು ಪರಿಗಣಿಸುತ್ತದೆ. ಇದು ಜಗತ್ತಿಗೆ ತುಂಬಾ ಅಪಾಯಕಾರಿ. ನಾನು ಪಾಕಿಸ್ತಾನದ ಜನರನ್ನು ಕೇಳಲು ಬಯಸುತ್ತೇನೆ. ಅವರು ಏನು ಸಾಧಿಸಿದ್ದಾರೆ? ಇಂದು, ಭಾರತವು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೆ, ನಿಮ್ಮ ಪರಿಸ್ಥಿತಿ ಏನು? ಭಯೋತ್ಪಾದನೆಯನ್ನು ಉತ್ತೇಜಿಸಿದವರು ನಿಮ್ಮ ಭವಿಷ್ಯವನ್ನು ಹಾಳುಮಾಡಿದರು ಎಂದು ಮೋದಿ ಒತ್ತಿ ಹೇಳಿದ್ದಾರೆ.

₹50,000 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ, ಪಾಕಿಸ್ತಾನದೊಂದಿಗೆ ಭೂಗಡಿ ಮತ್ತು ಸಮುದ್ರ ಗಡಿಗಳನ್ನು ಹಂಚಿಕೊಳ್ಳುವ ಗುಜರಾತ್‌ನ ಕಚ್ ಜಿಲ್ಲೆಯ ಭುಜ್ ಪಟ್ಟಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಭಯೋತ್ಪಾದನೆಯು ನಿಮ್ಮ (ಪಾಕಿಸ್ತಾನ) ಸರ್ಕಾರ ಮತ್ತು ಸೈನ್ಯಕ್ಕೆ ಹಣ ಗಳಿಸುವ ಒಂದು ಮಾರ್ಗವಾಗಿದೆ. ಭಯೋತ್ಪಾದನೆಯನ್ನು ಕೊನೆಗೊಳಿಸಲು ಪಾಕಿಸ್ತಾನದ ಜನರು ಮುಂದೆ ಬರಬೇಕು ಎಂದು ಕರೆ ನೀಡಿದ್ದಾರೆ.

ಸಂತೋಷ ಮತ್ತು ಶಾಂತಿಯುತ ಜೀವನವನ್ನು ನಡೆಸಿ. ಇಲ್ಲದಿದ್ದರೆ, ನಮ್ಮ ಗುಂಡು ನಿಮಗಾಗಿ ಇದೆ ಎಂದು ಗಡಿಯಾಚೆಗಿನ ಜನರಿಗೆ ನೀಡಿದ ಸಂದೇಶದಲ್ಲಿ ಪ್ರಧಾನಿ ಹೇಳಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ನಾನು 15 ದಿನಗಳವರೆಗೆ ಕಾಯುತ್ತಿದ್ದೆ. ಆದರೆ, ಅದು ಅವರ ಆಹಾರದ ಮೂಲದಂತೆ ಕಾಣುತ್ತದೆ. ಮೇ 9ರ ರಾತ್ರಿ ಪಾಕಿಸ್ತಾನವು ನಮ್ಮ ನಾಗರಿಕರ ಮೇಲೆ ದಾಳಿ ಮಾಡಲು ಯತ್ನಿಸಿದಾಗ, ನಮ್ಮ ಸೈನ್ಯವು ಎರಡು ಪಟ್ಟು ಬಲದಿಂದ ದಾಳಿ ಮಾಡಿ ಅವರ ವಾಯುನೆಲೆಗಳನ್ನು ಧ್ವಂಸಗೊಳಿಸಿತು ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.