ಪುಣೆ: ‘ಜನರ ಬ್ಯಾಂಕ್ ಖಾತೆಗೆ ₹15 ಲಕ್ಷ ಹಾಕಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಹಣ ಕೇಳಿದ್ದೆವು, ಅವರು ಕೊಡಲಿಲ್ಲ. ಹಾಗಾಗಿ ಜನರ ಖಾತೆಗೆ ಹಣ ಹಾಕಲು ಆಗಲಿಲ್ಲ. ಆದ್ದರಿಂದ ಹಂತ ಹಂತವಾಗಿ ಈ ಹಣವನ್ನು ಬ್ಯಾಂಕ್ ಖಾತೆಗೆ ಹಾಕಲಾಗುವುದು’ ಎಂದುಕೇಂದ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ ಆಠವಲೆ ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಯಂತೆಪ್ರತಿಯೊಬ್ಬರೂ ತಮ್ಮ ಬ್ಯಾಂಕ್ ಖಾತೆಗೆ ₹15 ಲಕ್ಷವನ್ನು ಪಡೆಯಲಿದ್ದಾರೆ. ಇಷ್ಟು ಹಣವನ್ನು ಒಂದೇ ಬಾರಿಗೆ ನೀಡಲು ತೊಂದರೆಗಳಿವೆ. ಸರ್ಕಾರದ ಬಳಿಯೂ ಅಷ್ಟು ಹಣ ಇಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಇದು ವಿಳಂಬವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಹ ನೀಡುತ್ತಿಲ್ಲ’ ಎಂದು ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ಉದ್ಯಮಿಗಳು ವಿದೇಶಗಳ ಬ್ಯಾಂಕಿನಲ್ಲಿಟ್ಟಿರುವ ಕಪ್ಪು ಹಣವನ್ನು ಮರಳಿ ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಜಮೆ ಮಾಡುವುದಾಗಿ ಮೋದಿ ಅವರು 2014ರ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು.
ಮೋದಿ ಅವರು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ, ದ್ರೋಹ ಮಾಡಿದ್ದಾರೆ ಎಂದುಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.