ADVERTISEMENT

ಸಮಯ ಬಂದಾಗ ಜನರೇ ಪಾಠ ಕಲಿಸುತ್ತಾರೆ: ಕೇಂದ್ರ ಸರ್ಕಾರಕ್ಕೆ ಗೆಹಲೋತ್ ಎಚ್ಚರಿಕೆ

ಪಿಟಿಐ
Published 3 ಡಿಸೆಂಬರ್ 2021, 10:29 IST
Last Updated 3 ಡಿಸೆಂಬರ್ 2021, 10:29 IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್   

ಜೈಪುರ:ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ಕೇಂದ್ರ ಸರ್ಕಾರವು ಜನರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಸಮಯ ಬಂದಾಗ ಜನರೇ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹಣದುಬ್ಬರದ ವಿರುದ್ಧ 'ಮೆಹಂಗಾಯಿ ಹಟಾವೋ' ರ‍್ಯಾಲಿ ನಡೆಸಲು ಕಾಂಗ್ರೆಸ್ ಮುಂದಾಗಿದೆ.ರ‍್ಯಾಲಿ ನಡೆಯಲಿರುವ ಇಲ್ಲಿನ ವಿದ್ಯಾಧರ ನಗರಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೆಹಲೋತ್, 'ಕೇಂದ್ರವು ದೇಶದ ಜನರ ಸಮಸ್ಯೆಗಳನ್ನೂ ಆಲಿಸುತ್ತಿಲ್ಲ ಅಥವಾ ರೈತರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ' ಎಂದು ಆರೋಪಿಸಿದ್ದಾರೆ.

ಮುಂದುವರಿದು, 'ಅವರು (ಕೇಂದ್ರ ಸರ್ಕಾರದವರು) ದುರಹಂಕಾರ ಪ್ರದರ್ಶಿಸುತ್ತಿದ್ದಾರೆ. ಸಮಯ ಬಂದಾಗ ಜನರೇ ಅವರಿಗೆ ಪಾಠ ಕಲಿಸುತ್ತಾರೆ' ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಹಾಗೆಯೇ, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲು ತಮ್ಮ ಪಕ್ಷಕ್ಕೆ ಅವಕಾಶ ನೀಡದಿರುವುದು ದುರದೃಷ್ಟಕರ ಎಂದು ಗೆಹಲೋತ್ ಬೇಸರ ವ್ಯಕ್ತಪಡಿಸಿದ್ದಾರೆ.

'ಹಣದುಬ್ಬರವು ದೇಶದಾದ್ಯಂತ ಸಮಸ್ಯೆಯಾಗಿಯೇ ಉಳಿದಿದೆ. ಉದ್ದೇಶಿತ ರ‍್ಯಾಲಿಗೆ ಏಕೆ ಅವಕಾಶ ನೀಡುತ್ತಿಲ್ಲ? ಅದು (ರ‍್ಯಾಲಿಯು) ದೇಶದ ಜನರ ಭಾವನೆಗಳನ್ನಷ್ಟೇ ಪ್ರತಿನಿಧಿಸುತ್ತಿತ್ತು' ಎಂದು ಹೇಳಿದ್ದಾರೆ.

ದೇಶದಾದ್ಯಂತ ಉಲ್ಬಣಿಸಿರುವ ಹಣದುಬ್ಬರದ ವಿರುದ್ಧ ಕಾಂಗ್ರೆಸ್ ಪಕ್ಷವು ಡಿಸೆಂಬರ್ 12 ರಂದು 'ಮೆಹಂಗಾಯಿ ಹಟಾವೋ' ರ‍್ಯಾಲಿಗೆ ಕರೆ ನೀಡಿದೆ. ಈ ಮೊದಲು ದೆಹಲಿಯಲ್ಲಿ ರ‍್ಯಾಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅನುಮತಿ ಸಿಗದ ಕಾರಣ ಜೈಪುರಕ್ಕೆ ಸ್ಥಳಾಂತರಗೊಂಡಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಅಜಯ್ ಮಾಕೆನ್ ಅವರು ರ‍್ಯಾಲಿಯ ಸಿದ್ಧತೆ ಪರಿಶೀಲನೆ ಸಲುವಾಗಿ ಶುಕ್ರವಾರ ಇಲ್ಲಿಗೆ ಆಗಮಿಸಿದ್ದಾರೆ. ಇವರಿಬ್ಬರೂ ಸೇರಿದಂತೆ ಪಕ್ಷದ ಹಲವು ನಾಯಕರು ಗೆಹಲೋತ್‌ ಅವರೊಂದಿಗೆ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ರ‍್ಯಾಲಿ ಆಯೋಜಿಸಲು ಜೈಪುರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಹೇಳಿರುವ ರಾಜಸ್ಥಾನ ಸಿಎಂ, ರಾಜ್ಯ ಹಾಗೂ ರಾಷ್ಟ್ರದ ಜನರು ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.