ADVERTISEMENT

ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವ: ಡಿ.12ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2024, 14:04 IST
Last Updated 7 ಡಿಸೆಂಬರ್ 2024, 14:04 IST
<div class="paragraphs"><p>ಸುಪ್ರೀಂ ಕೋರ್ಟ್‌&nbsp;</p></div>

ಸುಪ್ರೀಂ ಕೋರ್ಟ್‌ 

   

ನವದೆಹಲಿ: 1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ 12ರ ಮಧ್ಯಾಹ್ನ 3.30ಕ್ಕೆ ಸುಪ್ರೀಂ ಕೋರ್ಟ್ ನಿಗದಿ ಪಡಿಸಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ. ವಿಶ್ವನಾಥನ್ ಅವರಿರುವ ವಿಶೇಷ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ.

ADVERTISEMENT

ಕಾನೂನು ಅನಿಯಂತ್ರಿತ ಮತ್ತು ಅಸಮಂಜಸವಾಗಿದೆ. ಅಲ್ಲದೆ ಧರ್ಮಾಚರಣೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ. ಇದು ಭಾರತೀಯ ಸಂವಿಧಾನದ 14 ಮತ್ತು 25 ನೇ ವಿಧಿಯ ಅಡಿಯಲ್ಲಿ ಇರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಎನ್ನುವುದು ಅರ್ಜಿದಾರರ ವಾದ.

ಮುಖ್ಯ ಅರ್ಜಿದಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು 2020ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2021ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು.

ಇದಾದ ಬಳಿಕ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು.

ದೇಶದಲ್ಲಿರುವ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಯ ಸ್ಥಳಗಳು 1947ರ ಆಗಸ್ಟ್ 15ರಂದು ಹೇಗಿತ್ತೋ ಅದೇ ಸ್ಥಿತಿಯಲ್ಲಿ ಮುಂದುವರಿಯುತ್ತವೆ ಮತ್ತು ಅದರ ಸ್ವರೂಪವನ್ನು ಬದಲಾಯಿಸುವುದಕ್ಕಾಗಿ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಅವಕಾಶ ಇಲ್ಲ ಎಂದು ಕೇಂದ್ರವು ಘೋಷಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮಥುರಾ ನಿವಾಸಿ ದೇವಕೀನಂದನ ಠಾಕೂರ್ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ, ಕಾಯ್ದೆಯ 2, 3 ಮತ್ತು 4ನೇ ಸೆಕ್ಷನ್‌ಗಳ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ. ತಮ್ಮ ಪೂಜಾ ಸ್ಥಳಗಳು, ತೀರ್ಥಯಾತ್ರೆ ಸ್ಥಳಗಳು ಮತ್ತು ತಮ್ಮ ದೇವರ ಆಸ್ತಿಯನ್ನು ನ್ಯಾಯಾಂಗದ ಮೂಲಕ ಹಿಂದಕ್ಕೆ ಪಡೆದುಕೊಳ್ಳುವ ಅವಕಾಶವನ್ನು ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರಿಗೆ ನಿರಾಕರಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

(ಲೈವ್‌ ಲಾ ವರದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.