ಬುಲಂದ್‌ಶಹರ, ಉತ್ತರಪ್ರದೇಶ: ಇಲ್ಲಿನ ಸಿಕಂದರಾಬಾದ್‌ನಲ್ಲಿ ಬಾಟಲಿಗೆ ಪೆಟ್ರೋಲ್ ತುಂಬಿಸುವ ವಿಚಾರದಲ್ಲಿ ನಡೆದ ಜಗಳವು ತಾರಕಕ್ಕೇರಿ, ಇಬ್ಬರು ಯುವಕರು ಬಂಕ್‌ನ ಮ್ಯಾನೇಜರ್‌ನನ್ನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
‘ಇಬ್ಬರು ಯುವಕರು ಪೆಟ್ರೋಲ್ ತುಂಬಿಸಲು ತಮ್ಮ ಬೈಕ್‌ನಲ್ಲಿ ಬುಧವಾರ ಪೆಟ್ರೋಲ್ ಬಂಕ್‌ಗೆ ಬಂದಿದ್ದಾರೆ. ಈ ವೇಳೆ ಯುವಕರು ಬಾಟಲ್‌ಗೆ ಪೆಟ್ರೋಲ್ ತುಂಬಿಸುವಂತೆ ಮನವಿ ಮಾಡಿದ್ದು, ಅಲ್ಲಿನ ಸಿಬ್ಬಂದಿ ಬೇಡಿಕೆಯನ್ನು ನಿರಾಕರಿಸಿದ್ದಾರೆ. ನಂತರ, ಬಂಕ್‌ನ ಮ್ಯಾನೇಜರ್ ರಾಜು ಶರ್ಮಾ (30) ಬಳಿ ಈ ವಿಷಯ ಪ್ರಸ್ತಾಪಿಸಿ ಒತ್ತಾಯ ಮಾಡಿದ್ದಾರೆ. ಶರ್ಮಾ ಕೂಡ ಯುವಕರ ಬೇಡಿಕೆಯನ್ನು ನಿರಾಕರಿಸಿದ್ದಾರೆ.
ಈ ವೇಳೆ ಯುವಕರು–ಮ್ಯಾನೇಜರ್ ನಡುವೆ ತೀವ್ರವಾಗಿ ಜಗಳ ನಡೆದಿದ್ದು, ಸಿಟ್ಟಿಗೆದ್ದ ಯುವಕರು ಶರ್ಮಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಶರ್ಮಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟು ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಸ್ಥಳದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಆಧರಿಸಿ, ಆರೋಪಿಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.