ADVERTISEMENT

ಹಿಂಸಾಚಾರಕ್ಕೆ ಪಿಎಫ್ಐ ಹೊಣೆ: ₹5.2 ಕೋಟಿ ಠೇವಣಿ ಇಡಲು ಸಂಘಟನೆಗೆ ಕೋರ್ಟ್‌ ಸೂಚನೆ

ಪಿಟಿಐ
Published 29 ಸೆಪ್ಟೆಂಬರ್ 2022, 14:33 IST
Last Updated 29 ಸೆಪ್ಟೆಂಬರ್ 2022, 14:33 IST
   

ಕೊಚ್ಚಿ: ಸೆ.23ರ ಹಿಂಸಾಚಾರಕ್ಕೆ ನಿಷೇಧಿತ ಸಂಘಟನೆ ಪಿಎಫ್‌ಐ ಹೊಣೆ ಹೊರಬೇಕು ಎಂದು ಹೇಳಿರುವ ಕೇರಳ ಹೈಕೋರ್ಟ್,ಕೆಎಸ್‌ಆರ್‌ಟಿಸಿ ಮತ್ತು ರಾಜ್ಯ ಸರ್ಕಾರಕ್ಕೆ ಆಗಿರುವ ಹಾನಿಗಾಗಿ ಗೃಹ ಇಲಾಖೆಯಲ್ಲಿ ₹5.2 ಕೋಟಿ ಠೇವಣಿ ಇಡಬೇಕು ಎಂದು ಗುರುವಾರ ನಿರ್ದೇಶನ ನೀಡಿದೆ.

2019ರ ಹೈಕೋರ್ಟ್‌ ಆದೇಶದ ಹೊರತಾಗಿಯೂ ಸಂಘಟಕರ ಕಾನೂನು ಬಾಹಿರ ಪ್ರದರ್ಶನ, ರಸ್ತೆತಡೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ,ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲಿಪಿಎಫ್‌ಐನ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್‌ ಅವರನ್ನು ಆರೋಪಿಯನ್ನಾಗಿ ಮಾಡಿದೆ.

ನ್ಯಾಯಮೂರ್ತಿಗಳಾದ ಎ. ಕೆ. ಜಯಶಂಕರನ್ ನಂಬಿಯಾರ್ ಮತ್ತು ಮೊಹಮ್ಮದ್ ನಿಯಾಸ್ ಸಿ. ಪಿ. ಅವರ ಪೀಠವು, ಈ ಪ್ರಕರಣಗಳಲ್ಲಿ ಜಾಮೀನು ಅರ್ಜಿ ಪರಿಗಣಿಸುವಾಗ, ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯಗಳು ಆರೋಪಿಗಳಿಂದ ಆಸ್ತಿ ಹಾನಿ, ನಾಶಕ್ಕೆ ಸಂಬಂಧಿಸಿದ ಮೊತ್ತ ಪಾವತಿಸುವಂತೆಷರತ್ತು ವಿಧಿಸಬೇಕು ಎಂದೂ ನಿರ್ದೇಶನ ನೀಡಿದೆ.

ADVERTISEMENT

ರಾಜ್ಯದ ಜನರು ಭಯದಿಂದ ಬದುಕಲು ಸಾಧ್ಯವಿಲ್ಲ.ನಿಗದಿತ ಸಮಯದೊಳಗೆ ಠೇವಣಿ ಹಣ ಜಮಾ ಮಾಡಲು ವಿಫಲವಾದಾಗ, ರಾಜ್ಯ ಸರ್ಕಾರ ಪಿಎಫ್‌ಐನ ಸ್ವತ್ತು, ಆಸ್ತಿಗಳು ಅಲ್ಲದೆ ಸತ್ತಾರ್‌ ಮತ್ತು ಇತರ ಪದಾಧಿಕಾರಿಗಳ ವೈಯಕ್ತಿಕ ಆಸ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೂಡ ಕೋರ್ಟ್ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.