ADVERTISEMENT

₹2,000 ನೋಟುಗಳ ಮುಕ್ತ ವಿನಿಮಯದ ವಿರುದ್ಧ ಪಿಐಎಲ್‌: ಖಾತೆ ಜಮೆಗೆ ಕೋರಿಕೆ

ಪಿಟಿಐ
Published 22 ಮೇ 2023, 12:39 IST
Last Updated 22 ಮೇ 2023, 12:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಯಾವುದೇ ಮನವಿ, ಗುರುತಿನ ಚೀಟಿಗಳಿಲ್ಲದೇ ₹2,000 ನೋಟುಗಳನ್ನು ಬದಲಾಯಿಸಿಕೊಳ್ಳಲು ನೀಡಿರುವ ಅನುಮತಿಯ ವಿರುದ್ಧ ಸೋಮವಾರ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಮುಕ್ತ ವಿನಿಮಯಕ್ಕೆ ಆರ್‌ಬಿಐ ಮತ್ತು ಎಸ್‌ಬಿಐ ಹೊರಡಿಸಿರುವ ಅಧಿಸೂಚನೆಗಳು ವಿವೇಚನ ರಹಿತ ಮತ್ತು ತರ್ಕರಹಿತವಾದದ್ದು. ಅಲ್ಲದೇ, ಸಂವಿಧಾನದ 14 ನೇ ವಿಧಿಯ ಉಲ್ಲಂಘನೆ ಎಂದು ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ತಮ್ಮ ಮನವಿಯಲ್ಲಿ ಹೇಳಿದ್ದಾರೆ.

ದೊಡ್ಡ ಮೊತ್ತದ ಕರೆನ್ಸಿಯು ವ್ಯಕ್ತಿಗಳ ಲಾಕರ್‌ಗಳಲ್ಲಿ ಸಂಗ್ರಹವಾಗಿರುತ್ತವೆ ಅಥವಾ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ಮಾವೋವಾದಿಗಳು, ಮಾದಕವಸ್ತು ಕಳ್ಳಸಾಗಣೆದಾರರು, ಗಣಿಗಾರಿಕೆ ಮಾಫಿಯಾಗಳು ಮತ್ತು ಭ್ರಷ್ಟರು ಸಂಗ್ರಹಿಸಿಟ್ಟಿರುತ್ತಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

ಹೆಚ್ಚಿನ ಮೌಲ್ಯದ ಕರೆನ್ಸಿಗಳು ಭ್ರಷ್ಟಾಚಾರದ ಮುಖ್ಯ ಮೂಲ. ಭಯೋತ್ಪಾದನೆ, ನಕ್ಸಲ್‌ ಚಟುವಟಿಕೆ , ಪ್ರತ್ಯೇಕವಾದ, ಮೂಲಭೂತವಾದ, ಜೂಜು, ಕಳ್ಳಸಾಗಣೆ, ಅಕ್ರಮ ಹಣ ವರ್ಗಾವಣೆ, ಅಪಹರಣ, ಸುಲಿಗೆ, ಲಂಚ ಮತ್ತು ವರದಕ್ಷಿಣೆ ಇತ್ಯಾದಿ ಕಾನೂನುಬಾಹಿರ ಚಟುವಟಿಕೆಗಳಿಗೆ ಹಣ ಬಳಕೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ₹2,000 ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಠೇವಣಿಯಾಗುವಂತೆ ಆರ್‌ಬಿಐ ಮತ್ತು ಎಸ್‌ಬಿಐ ಖಾತ್ರಿಪಡಿಸಿಕೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.

‘ಪ್ರತಿ ಕುಟುಂಬವು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂದು ಕೇಂದ್ರವು ಇತ್ತೀಚೆಗೆ ಘೋಷಿಸಿದೆ. ಹೀಗಿದ್ದಾಗ ಗುರುತಿನ ಚೀಟಿ ಪಡೆಯದೆ ₹2,000 ನೋಟುಗಳನ್ನು ಬದಲಾಯಿಸಲು ಆರ್‌ಬಿಐ ಏಕೆ ಅನುಮತಿ ನೀಡುತ್ತಿದೆ? 80 ಕೋಟಿ ಬಿಪಿಎಲ್ ಕುಟುಂಬಗಳು ಉಚಿತ ಆಹಾರಧಾನ್ಯ ಪಡೆಯುತ್ತಿವೆ. ಇದರರ್ಥ 80 ಕೋಟಿ ಭಾರತೀಯರು ₹2,000 ರೂಪಾಯಿಗಳ ನೋಟುಗಳನ್ನು ಅಪರೂಪವಾಗಿ ಮಾತ್ರವೇ ಬಳಸುತ್ತಿದ್ದಾರೆ ಎಂದಾಯ್ತು. ಹೀಗಾಗಿ, ₹2,000 ರೂಪಾಯಿಗಳ ನೋಟುಗಳನ್ನು ಬ್ಯಾಂಕ್ ಖಾತೆಗೆ ಮಾತ್ರ ಠೇವಣಿ ಮಾಡುವಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರ್‌ಬಿಐ ಮತ್ತು ಎಸ್‌ಬಿಐಗೆ ನಿರ್ದೇಶನ ನೀಡಬೇಕು ಎಂದು’ ಅರ್ಜಿದಾರರು ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.

’₹2,000 ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡುವುದರಿಂದ ಕಪ್ಪುಹಣ ಮತ್ತು ಅಕ್ರಮ ಆಸ್ತಿ ಹೊಂದಿರುವವರನ್ನು ಸುಲಭವಾಗಿ ಪತ್ತೆಹಚ್ಚಬಹುದು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಚಲಾವಣೆಯಲ್ಲಿರುವ ₹2,000 ರೂಪಾಯಿ ಕರೆನ್ಸಿ ನೋಟುಗಳನ್ನು ಹಿಂಪಡೆಯುವುದಾಗಿ ಮೇ 19 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿತು. ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ ಸೆಪ್ಟೆಂಬರ್ 30ರೊಳಗೆ ವಿನಿಮಯ ಮಾಡಿಕೊಳ್ಳಬಹುದು ಎಂದು ಅದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.