ADVERTISEMENT

ಅಜಿತ್ ಪವಾರ್ ಸಾವು: ನ್ಯಾಯಾಂಗ ತನಿಖೆಗೆ ಆಗ್ರಹ– ಬಾಂಬೆ ಹೈಕೋರ್ಟ್‌ಗೆ PIL

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2026, 13:05 IST
Last Updated 26 ಫೆಬ್ರುವರಿ 2026, 13:05 IST
   

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಕೇತನ್ ತಿರೋಡ್ಕರ್ ಎಂಬುವವರು ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಸಲ್ಲಿಸಿದ್ದಾರೆ.

ಅಜಿತ್ ಪವಾರ್‌ ‘ಆಕಸ್ಮಿಕ’ ಸಾವು ಪ್ರಕರಣದ ತನಿಖೆಯನ್ನು ನಡೆಸುವಂತೆ ಸಿಐಡಿಗೆ ನಿರ್ದೇಶನ ನೀಡಬೇಕು ಮತ್ತು ನಿವೃತ್ತ ಡಿಜಿಸಿಎ ನಿರ್ದೇಶಕರು, ವಾಣಿಜ್ಯ ವಿಮಾನಯಾನ ಸಂಸ್ಥೆಯ ಮುಖ್ಯ ನಿರ್ವಹಣಾ ಎಂಜಿನಿಯರ್, ನಿವೃತ್ತ ಬಾಂಬೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಅವರು ಕೋರಿದ್ದಾರೆ.

ಜನವರಿ 28ರಂದು ವಿಎಸ್‌ಆರ್ ವೆಂಚರ್ಸ್ ಒಡೆತನದ ವಿಮಾನ ಪತನಗೊಂಡು ಅಜಿತ್ ಪವಾರ್ ಹಾಗೂ ಇತರ ನಾಲ್ವರು ಮೃತಪಟ್ಟಿದ್ದರು.

ADVERTISEMENT

ಅರ್ಜಿಯಲ್ಲಿ ಏನಿದೆ?

ವಿಮಾನ ಅಪಘಾತದ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಕೋರಿ ಫೆ.20ರಂದು ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಅವರಿಗೆ ಪತ್ರ ಬರೆದಿದ್ದಾಗಿ ತಿರೋಡ್ಕರ್ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ವಿಮಾನದ ಬುಕ್ಕಿಂಗ್‌, ಕಪ್ಪು ಪೆಟ್ಟಿಗೆ ವಿಶ್ಲೇಷಣೆ ಸೇರಿ ಹಲವು ವಿಷಯಗಳ ಬಗ್ಗೆ ವಿವರಗಳನ್ನು ಕೋರಿ ಡಿಜಿಸಿಎ, ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ), ಮುಖ್ಯಮಂತ್ರಿ ಕಚೇರಿ ಮತ್ತು ಬಾರಾಮತಿ ಪೊಲೀಸರಿಗೆ ಆರ್‌ಟಿಐ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಇದ್ಯಾವುದಕ್ಕೂ ಪ್ರತಿಕ್ರಿಯೆ ಬರದ ಕಾರಣ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಕೊನೆಯ ಕ್ಷಣದಲ್ಲಿ ರಸ್ತೆ ಪ್ರಯಾಣದಿಂದ ವಿಮಾನ ಪ್ರಯಾಣಕ್ಕೆ ಬದಲಾಯಿಸಿಲಾಗಿದೆ ಎಂಬ ಆರೋಪ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪಿಐಎಲ್‌ನಲ್ಲಿ ಅವರು ಎತ್ತಿದ್ದಾರೆ. ಪೈಲಟ್‌ಗಳ ಬದಲಾವಣೆಯನ್ನು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.