ಪಿಣರಾಯಿ ವಿಜಯನ್
ತಿರುವನಂತಪುರ: ‘ದಿ ಕೇರಳ ಸ್ಟೋರಿ’ ಸಿನಿಮಾದ ಎರಡನೇ ಅಧ್ಯಾಯದ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದಾರೆ. ‘ಸಿನಿಮಾದ ಮೊದಲ ಭಾಗವನ್ನು ರಾಜ್ಯದ ವಿರುದ್ಧ ದ್ವೇಷ ಹರಡುವ ಹಾಗೂ ಜಾತ್ಯತೀತ ಸಂಪ್ರದಾಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಮಾಡಲಾಗಿತ್ತು’ ಎಂದಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರ ಕಚೇರಿ, ‘ಸಮಾಜದಲ್ಲಿ ಭಿನ್ನತೆ ಹಾಗೂ ದ್ವೇಷ ಹರಡಲು ಸೃಷ್ಟಿ ಮಾಡಿದ ವಿಷಪೂರಿತ ರಚನೆಗಳನ್ನು ಪ್ರದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ‘ಬೀಫ್’ ನಂತಹ ಸಿನಿಮಾಗಳಿಗೆ ಚಲನಚಿತ್ರೋತ್ಸವದಲ್ಲಿ ಅವಕಾಶ ನಿರಾಕರಿಸಲಾಗುತ್ತದೆ’ ಎಂದು ಟೀಕಿಸಿದ್ದಾರೆ.
‘ದಿ ಕೇರಳ ಸ್ಟೋರಿ' ಸಿನಿಮಾ ಬಿತ್ತರಿಸಿದ ಸುಳ್ಳು ನಿರೂಪಣೆಯನ್ನು ಸಂಘ ಪರಿವಾರ ಪಸರಿಸಿವೆ ಎಂದು ಅವರು ಹೇಳಿದ್ದಾರೆ.
ಪರಸ್ಪರ ಒಪ್ಪಿಗೆಯಿಂದಾದ ಮದುವೆಗಳನ್ನೂ ಕೋಮುವಾದ ಹಾಗೂ ಬಲವಂತದ ಧರ್ಮ ಪರಿವರ್ತನೆ ಎಂದು ಬಿಂಬಿಸಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಯಾವುದೇ ಕೋಮು ಗಲಭೆಗಳಿಲ್ಲದ ಮತ್ತು ಸಮುದಾಯಗಳ ನಡುವೆ ಪರಸ್ಪರ ಗೌರವದ ಸಂಪ್ರದಾಯವಿರುವ ಕೇರಳವನ್ನು ಅಂತಹ ಶಕ್ತಿಗಳು ಹಗೆತನದಿಂದ ನೋಡುತ್ತವೆ ಎಂದ ಅವರು, ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು ನಾಶಪಡಿಸಲು ಯತ್ನಿಸುತ್ತಿರುವ ಅವರು 'ನಾಡಿನ ಶತ್ರುಗಳು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸುಸ್ಥಿರ ಅಭಿವೃದ್ಧಿಯಲ್ಲಿ ಅಗ್ರಸ್ಥಾನದಲ್ಲಿರುವ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮಾದರಿಯಾಗಿರುವ ಧಾರ್ಮಿಕ ಸಾಮರಸ್ಯದ ಕೇರಳವನ್ನು ಭಯೋತ್ಪಾದನೆಯ ಕೇಂದ್ರ ಎಂದು ಚಿತ್ರೀಕರಣ ಮಾಡುವ ಪ್ರಯತ್ನವನ್ನು ತಿರಸ್ಕರಿಸಬೇಕು’ ಎಂದು ಕರೆ ನೀಡಿದ್ದಾರೆ.
‘ಕೇರಳದ ಜಾತ್ಯತೀತ ಬುನಾದಿಯು ಸುಳ್ಳು ಪ್ರಚಾರದಿಂದ ಕುಸಿಯದಂತೆ ನೋಡಿಕೊಳ್ಳುವುದು ಮತ್ತು ಜಾತ್ಯತೀತತೆ ಹಾಗೂ ಸಹೋದರತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಅದನ್ನು ತಿರಸ್ಕರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.