ADVERTISEMENT

ಮನಕಲಕುವ ದೃಶ್ಯ: ಶೂನ್ಯ ಡಿಗ್ರಿ ತಾಪಮಾನದಲ್ಲಿ 4 ದಿನ ಮಾಲೀಕನ ಮೃತದೇಹ ಕಾದ ಶ್ವಾನ

ಏಜೆನ್ಸೀಸ್
Published 27 ಜನವರಿ 2026, 11:19 IST
Last Updated 27 ಜನವರಿ 2026, 11:19 IST
<div class="paragraphs"><p>ಪಿಟ್‌ಬುಲ್‌ ಹೆಸರಿನ ನಾಯಿ</p></div>

ಪಿಟ್‌ಬುಲ್‌ ಹೆಸರಿನ ನಾಯಿ

   Prithvi

ಶಿಮ್ಲಾ: ಹಿಮಾಚಲದಲ್ಲಿ ದಟ್ಟ ಹಿಮದಡಿ ಸಿಲುಕಿ ಮೃತಪಟ್ಟ ತನ್ನ ಮಾಲೀಕನ ಮೃತದೇಹವನ್ನು ಶ್ವಾನವೊಂದು ಸತತ ನಾಲ್ಕು ದಿನಗಳ ಕಾಲ ಶೂನ್ಯ ಡಿಗ್ರಿ ತಾಪಮಾನದಲ್ಲಿ ಕಾವಲು ಕಾದಿದೆ.

ಈ ಮನಕರಗುವ ಘಟನೆ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದು, ಪ್ರೀತಿ ಮತ್ತು ನಿಷ್ಠೆಯ ಮೂಲಕ ಪಿಟ್‌ಬುಲ್‌ ಹೆಸರಿನ ಈ ನಾಯಿ ಎಲ್ಲರ ಮನ ಗೆದ್ದಿದೆ.

ADVERTISEMENT

ಇಲ್ಲಿನ ಚಂಬಾ ಜಿಲ್ಲೆಯ ಭರ್ಮೌರ್‌ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ.

ಸಾಮಾಜಿಕ ಮಾಧ್ಯಮಗಳಿಗೆ ರೀಲ್ಸ್‌ ಮಾಡುವ ಉದ್ದೇಶದಿಂದ ಜನವರಿ 22ರಂದು ವಿಕ್ಷಿತ್ ರಾಣಾ (19) ಮತ್ತು ಆಯುಷ್ (13) ಭರ್ಮೌರ್‌ ಪ್ರದೇಶದ ಭರ್ಮಣಿ ದೇವಾಲಯದ ಸಮೀಪದಲ್ಲಿರುವ ಎತ್ತರದ ಬೆಟ್ಟಗಳಿಗೆ ತೆರಳಿದ್ದರು. ಕಂಟೆಂಟ್‌ ಕ್ರಿಯೇಟರ್ ಆಗಿದ್ದ ವಿಕ್ಷಿತ್ ರಾಣಾ ಸಹಾಯಕ್ಕಾಗಿ ಬಾಲಕ ಆಯುಷ್‌ನನ್ನು ಕರೆದುಕೊಂಡು ಹೋಗಿದ್ದರು. ಜೊತೆಗೆ ರಾಣಾ ಅವರ ಪಿಟ್‌ಬುಲ್‌ ಶ್ವಾನವು ಬಂದಿತ್ತು.

ಹವಾಮಾನ ಇಲಾಖೆಯು ಈ ಪ್ರದೇಶದಲ್ಲಿ ಹಿಮಪಾತವಾಗುವ ಬಗ್ಗೆ ಯೆಲ್ಲೋ ಅಲರ್ಟ್‌ ಕೊಟ್ಟಿತ್ತು. ಆದರೆ ಮುನ್ಸೂಚನೆ ನಿರ್ಲಕ್ಷಿಸಿ ಅವರು  ಆ ಸ್ಥಳಕ್ಕೆ ತೆರಳಿದ್ದರು.

ಆ ದಿನ ಸಂಜೆ ವೇಳೆಗೆ ಹವಾಮಾನ ಮತ್ತಷ್ಟು ಹದಗೆಟ್ಟ ಪರಿಣಾಮ ನಾಯಿ ಪಿಟ್‌ಬುಲ್‌ ಸಹಿತ ವಿಕ್ಷಿತ್‌, ಆಯುಷ್‌ ಹಿಮದ ನಡುವೆ ಸಿಲುಕಿದ್ದರು. ತಾವು ಅಪಾಯದಲ್ಲಿ ಇರುವುದಾಗಿ ತಮ್ಮ ಕುಟುಂಬಕ್ಕೆ ವಿಕ್ಷಿತ್‌ ಕರೆ ಮಾಡಿದ್ದರು. ನಂತರ ಕುಟುಂಬದವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ತಕ್ಷಣವೇ ಭದ್ರತಾ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದರು.

ವಿಪರೀತ ಚಳಿ, ವ್ಯಾಪಕ ಹಿಮ ಬಿದ್ದಿದ್ದರಿಂದ ಅವರು ಅಲ್ಲಿಂದ ಹೊರ ಬರಲಾಗದೆ ಮೃತಪಟ್ಟಿದ್ದರು. ಘಟನೆ ನಡೆದು ಮೂರು ದಿನಗಳ ಬಳಿಕ ಭದ್ರತಾ ಪಡೆಗಳು ಹೆಲಿಕಾಪ್ಟರ್‌ನಲ್ಲಿ ಕಾರ್ಯಾಚರಣೆ ನಡೆಸುವಾಗ ದಟ್ಟ ಹಿಮದಲ್ಲಿ ನಾಯಿಯೊಂದು ನಿಂತಿರುವುದು ಕಂಡು ಬಂದಿದೆ. ಅಲ್ಲಿಗೆ ತೆರಳಿ ನೋಡಿದಾಗ ವಿಕ್ಷಿತ್‌ ಶವದ ಬಳಿ ಪಿಟ್‌ಬುಲ್‌ ಇತ್ತು ಎಂದು ಭದ್ರತಾ ಪಡೆ ಅಧಿಕಾರಿಗಳು ಹೇಳಿದರು. 

ಮೃತದೇಹ ಕೊಂಡೊಯ್ಯಲು ರಕ್ಷಣಾ ಸಿಬ್ಬಂದಿಗೆ ಸಾಕು ನಾಯಿ ಪಿಟ್‌ಬುಲ್‌ ಅವಕಾಶವನ್ನೇ ಕೊಡಲಿಲ್ಲ. ಅಪರಿಚಿತರು ಎಂಬ ಕಾರಣಕ್ಕೆ ವಿಕ್ಷಿತ್‌ ಶವ ಮುಟ್ಟಲು ಬಂದ ಕೂಡಲೇ ನಿತ್ರಾಣವಾಗಿದ್ದರೂ ಬೊಗಳುತ್ತಲೇ ಇತ್ತು. ನಂತರ ಸಿಬ್ಬಂದಿ ಶ್ವಾನವನ್ನು ಪ್ರೀತಿಯಿಂದ ಸಮಾಧಾನಪಡಿಸಲು ಒಂದು ತಾಸು ಬೇಕಾಯಿತು ಎಂದು ಅಧಿಕಾರಿಗಳು ಹೇಳಿದರು.

ಅಲ್ಲಿಂದ ಎರಡು ಮೃತದೇಹಗಳನ್ನು ಹೊರತೆಗೆದು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಹಾಗೂ ಪಿಟ್‌ಬುಲ್‌ ನಾಯಿಯನ್ನು ವಿಕ್ಷಿತ್‌ ಕುಟುಂಬಕ್ಕೆ ನೀಡಲಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ.

ಪ್ರಾಣಿಗಳಿಂದ ನಾಲ್ಕು ದಿನಗಳ ಕಾಲ ಮಾಲೀಕನ ಮೃತದೇಹವನ್ನು ಪಿಟ್‌ಬುಲ್‌ ರಕ್ಷಣೆ ಮಾಡಿದೆ. ಇದು ತೋರಿದ ನಿಷ್ಠೆ ಪ್ರಾಣಿ ಪ್ರಿಯರ ಪ್ರೀತಿಗೆ ಪಾತ್ರವಾಗಿದೆ. ‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.