ADVERTISEMENT

ಕೇಂದ್ರ, ಉಬರ್‌ಗೆ ಹೈಕೋರ್ಟ್ ನೋಟಿಸ್

ಪಿಟಿಐ
Published 26 ಡಿಸೆಂಬರ್ 2024, 13:18 IST
Last Updated 26 ಡಿಸೆಂಬರ್ 2024, 13:18 IST
   

ನವದೆಹಲಿ: ಅಂಗವಿಕಲ ವ್ಯಕ್ತಿಗಳು ಬಾಡಿಗೆ ಟ್ಯಾಕ್ಸಿ ಸೇವೆಗಳನ್ನು ಪಡೆದುಕೊಳ್ಳುವಾಗ ತಾರತಮ್ಯ ಎದುರಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವು ತಿಳಿಸುವಂತೆ ದೆಹಲಿ ಹೈಕೋರ್ಟ್‌, ಕೇಂದ್ರ ಸರ್ಕಾರ ಮತ್ತು ಬಾಡಿಗೆ ಟ್ಯಾಕ್ಸಿ ಸೇವೆ ಒದಗಿಸುವ ಉಬರ್‌ ಕಂಪನಿಗೆ ಸೂಚಿಸಿದೆ.

ದೃಷ್ಟಿ ದೋಷದಿಂದ ಬಳಲುತ್ತಿರುವ ವಕೀಲ ರಾಹುಲ್‌ ಬಜಾಜ್‌ ಅವರ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸಂಜೀವ್‌ ನರುಲಾ ಅವರು ಕೇಂದ್ರ ಸರ್ಕಾರ ಮತ್ತು ಉಬರ್‌ ಇಂಡಿಯಾ ಟೆಕ್ನಾಲಜಿ ಪ್ರೈವೇಟ್‌ ಲಿಮಿಟೆಡ್‌ಗೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯೆ ನೀಡುವಂತೆ ಹೇಳಿದರು. 

ಉಬರ್‌ ಆ್ಯಪ್‌ ಮೂಲಕ ಆಟೊ ಬುಕ್‌ ಮಾಡಿದ್ದ ತಮ್ಮ ಕಕ್ಷಿಗಾರ ಬಾಡಿಗೆ ಸೇವೆ ಪಡೆದುಕೊಳ್ಳುವಾಗ ತಾರತಮ್ಯ ಮತ್ತು ಅಗೌರವದ ವರ್ತನೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದ್ದಾರೆ ಎಂದು ರಾಹುಲ್‌ ಪರ ಹಾಜರಿದ್ದ ವಕೀಲರು ಆರೋಪಿಸಿದ್ದಾರೆ. 

ADVERTISEMENT

‘ಆಟೊ ಚಾಲಕನು ರಾಹುಲ್‌ ಅವರನ್ನು ನಿಗದಿತ ಸ್ಥಳಕ್ಕೆ ಡ್ರಾಪ್‌ ಮಾಡಲು ನಿರಾಕರಿಸಿದ್ದಾನೆ. ಇಷ್ಟವಿಲ್ಲದೆಯೇ ಸವಾರಿಗೆ ಒಪ್ಪಿದ ನಂತರ ಅಗೌರವ ತೋರಿದ್ದಾನೆ’ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಪೀಠವು ಮುಂದಿನ ವಿಚಾರಣೆಯನ್ನು ಮಾರ್ಚ್‌ 27ಕ್ಕೆ ನಿಗದಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.