ADVERTISEMENT

ನಕ್ಸಲೀಯರಿಗೆ ಸೇರಿದ ಸ್ಫೋಟಕ, ಶಸ್ತ್ರಾಸ್ತ್ರ ವಶ

ಎನ್‌ಐಎ–‌ ಜಾರ್ಖಂಡ್‌ ಪೊಲೀಸರ ಜಂಟಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 31 ಮೇ 2023, 12:37 IST
Last Updated 31 ಮೇ 2023, 12:37 IST
ದಿನೇಶ್‌ ಗೋಪೆ –ಪಿಟಿಐ ಚಿತ್ರ
ದಿನೇಶ್‌ ಗೋಪೆ –ಪಿಟಿಐ ಚಿತ್ರ   

ನವದೆಹಲಿ: ಬಂಧಿತ ನಕ್ಸಲ್‌ ಕಮಾಂಡರ್‌ ದಿನೇಶ್‌ ಗೋಪೆ ನೀಡಿದ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಪೊಲೀಸ್‌ ಪಡೆ ಜಾರ್ಖಂಡ್‌ನಲ್ಲಿ ನಡೆಸಿದ ಎರಡು ದಿನಗಳ ಜಂಟಿ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಿಷೇಧಿತ ನಕ್ಸಲ್‌ ಸಂಘಟನೆಯಾದ ಪೀಪಲ್ಸ್‌ ಲಿಬರೇಷನ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಲ್ಎಫ್‌ಐ) ಸ್ವಯಂ ಘೋಷಿತ ನಾಯಕ ಗೋಪೆ ಅಲಿಯಾಸ್‌ ಕುಲದೀಪ್‌ ಯಾದವ್‌ನನ್ನು ಮೇ 21ರಂದು ದೆಹಲಿಯಲ್ಲಿ ಎನ್‌ಐಎ ಬಂಧಿಸಿತ್ತು.

ಆತ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಒಟ್ಟು 62.3 ಕೆ.ಜಿ ಜಿಲೆಟಿನ್‌, ನೂರಾರು ಕಾಡತೂಸುಗಳು, ಎರಡು ಕಚ್ಚಾ ಬಾಂಬ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಗೋಪೆ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಪಿಎಲ್‌ಎಫ್‌ಐ ಕಾರ್ಯಕರ್ತರಿಂದ ₹ 25.38 ಲಕ್ಷ ಅಮಾನ್ಯಗೊಂಡ ನೋಟುಗಳನ್ನು ಮುಟ್ಟುಗೋಲು ಹಾಕಿಕೊಂಡ ಪ್ರಕರಣದಲ್ಲಿ ಈತನ ವಿರುದ್ಧ ಎನ್ಐಎ ಆರೋಪ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಈತನನ್ನು ಎನ್‌ಐಎ ವಶಕ್ಕೆ ನೀಡಿದೆ. 

ಜಾರ್ಖಂಡ್‌ನ ಖೂಂತಿ ಜಿಲ್ಲೆಯ ಈತನ ಬಗ್ಗೆ ಸುಳಿವು ನೀಡಿದವರಿಗೆ ಎನ್‌ಐಎ ₹ 5 ಲಕ್ಷ ಹಾಗೂ ಈತನ ತಲೆಗೆ ಜಾರ್ಖಂಡ್‌ ಸರ್ಕಾರ ₹ 25 ಲಕ್ಷ ಬಹುಮಾನ ಘೋಷಿಸಿತ್ತು.

ತನ್ನ ಸಹಚರರ ಮೂಲಕ ಈತ ಉದ್ಯಮಿಗಳು ಮತ್ತು ಗುತ್ತಿಗೆದಾರರಲ್ಲಿ ಭಯ ಹುಟ್ಟಿಸಿ ಹಣ ಸುಲಿಗೆ ಮಾಡುತ್ತಿದ್ದ. ಜೊತೆಗೆ, ವ್ಯವಸ್ಥಿತ ದಾಳಿ ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ. ಜಾರ್ಖಂಡ್‌, ಬಿಹಾರ, ಒಡಿಶಾದ ಹಲವೆಡೆ ನೂರಾರು ಭಯೋತ್ಪಾದನಾ ಕೃತ್ಯ ಎಸಗಿದ ಆರೋಪವೂ ಈತನ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.