ADVERTISEMENT

ಕೋವಿಡ್ ಲಸಿಕೆ ಸುಳ್ಳು ವದಂತಿ ಹಬ್ಬಿಸದಿರಿ: ಪ್ರಧಾನಿ ಮೋದಿ ಕರೆ

ಪಿಟಿಐ
Published 24 ಜನವರಿ 2021, 13:36 IST
Last Updated 24 ಜನವರಿ 2021, 13:36 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಕೋವಿಡ್–19 ಲಸಿಕೆ ಅಭಿವೃದ್ಧಿ ಪಡಿಸುವ ಮೂಲಕ ಭಾರತದ ವಿಜ್ಞಾನಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಈಗ ನಾವು ನಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡಬೇಕಿದೆ. ಲಸಿಕೆ ಕುರಿತಂತೆ ಸುಳ್ಳು ವದಂತಿಗಳನ್ನು ಹರಡುವ ಪ್ರತಿಯೊಂದು ನೆಟ್‌ವರ್ಕ್ (ಜಾಲತಾಣ) ಅನ್ನು ನಾವು ಸರಿಯಾದ ಮಾಹಿತಿಯ ಮೂಲಕ ಸೋಲಿಸಬೇಕಾಗಿದೆ’ ಎಂದು ಪ್ರಧಾನ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿರುವ ಎನ್‌ಸಿಸಿ ಕೆಡೆಟ್ಸ್, ಎನ್‌ಎಸ್‌ಎಸ್‌ ಕಾರ್ಯಕರ್ತರು ಮತ್ತು ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಂತಹ ಸಂಸ್ಥೆಗಳು ಸವಾಲಿನ ಸಂದರ್ಭವನ್ನು ಎದುರಿಸುವಾಗ ಯಾವಾಗಲೂ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿವೆ. ಕೋವಿಡ್‌ನಂಥ ಸಂದರ್ಭದಲ್ಲೂ ನಿಮ್ಮ ಪಾತ್ರ ದೊಡ್ಡದು. ಸರ್ಕಾರ ಮತ್ತು ಆಡಳಿತ ಬಯಸಿದಾಗ ನೀವು ಸ್ವಯಂಸೇವಕರು ಮುಂದೆ ಬಂದು ಅಗತ್ಯವಾದ ಸಹಾಯ ಮಾಡಿದ್ದೀರಿ’ ಎಂದು ಶ್ಲಾಘಿಸಿದರು.

‘ಆರೋಗ್ಯ ಸೇತು ಆ್ಯಪ್ ಇರಬಹುದು ಕೊರೊನಾ ವೈರಸ್ ಸೋಂಕು ಹರಡುವಿಕೆಯ ಸಂದರ್ಭವಿರಬಹುದು ಆಗೆಲ್ಲಾ ನೀವು ಜಾಗೃತಿಯ ಕೆಲಸ ಮಾಡಿದ್ದೀರಿ. ನಿಮ್ಮ ಕೆಲಸವು ಪ್ರಶಂಸನೀಯವಾದದ್ದು’ ಎಂದರು.

ADVERTISEMENT

‘ಕೋವಿಡ್‌–19 ಲಸಿಕಾ ಕಾರ್ಯಕ್ರಮದ ಕುರಿತು ಯುವಜನರು ಜನರಿಗೆ ಸರಿಯಾದ ಮಾಹಿತಿಯನ್ನು ಒದಗಿಸುವ ಕೆಲಸವನ್ನು ಮಾಡಬೇಕಾದ ಅಗತ್ಯವಿದೆ. ಬಡವರು, ಸಾರ್ವಜನಿಕರು ಹೀಗೆ ಸಮಾಜದ ಎಲ್ಲಾ ವರ್ಗದ ಜನರಿಗೂ ಲಸಿಕಾ ಕಾರ್ಯಕ್ರಮವನ್ನು ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ಸಹಾಯ ಮಾಡಲು ಯುವಜನರು ಮುಂದೆ ಬರಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆ’ ಎಂದು ಮೋದಿ ಹೇಳಿದರು.

‘ಯಾರಾದರೂ ಹೇಳುವ ಮೂಲಕ ಭಾರತವು ಸ್ವಾವಲಂಬಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಯುವಕರಿಗೆ ಬೇಕಾದ ಅಗತ್ಯ ಕೌಶಲಗಳನ್ನು ಕಲಿಸುವ ನಿಟ್ಟಿನಲ್ಲಿ 2014ರಲ್ಲಿ ಕೌಶಲ ಅಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಲಾಗಿದೆ. ಸಚಿವಾಲಯದ ಮೂಲಕ ಇದುವರೆಗೆ 5.5 ಕೋಟಿಗೂ ಹೆಚ್ಚು ಯುವಜನರಿಗೆ ವಿವಿಧ ಕೌಶಲ ತರಬೇತಿ ನೀಡಲಾಗಿದೆ’ ಎಂದು ಪ್ರಧಾನಿ ಮಾಹಿತಿ ನೀಡಿದರು.

‘ಭಾರತದ ಯುವಜನರು ತಮ್ಮ ಕೌಶಲವನ್ನಾಧರಿಸಿ ಹೊಸ ಉದ್ಯೋಗವಾಕಾಶಗಳನ್ನು ಪಡೆಯುವುದು ಕೌಶಲ ಅಭಿವೃದ್ಧಿ ಸಚಿವಾಲಯದ ಉದ್ದೇಶವಾಗಿದೆ. ‘ಒಂದೇ ಭಾರತ, ಶ್ರೇಷ್ಠ ಭಾರತ’ ಅನ್ನುವ ಮನೋಭಾವದಿಂದ ಹೆಚ್ಚಿನ ಶಕ್ತಿಯನ್ನು ಪಡೆಯಲು ಸಾಧ್ಯ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.