ADVERTISEMENT

ಸಂದೇಶ್‌ಖಾಲಿ ಪ್ರಕರಣ: ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪಿಟಿಐ
Published 1 ಮಾರ್ಚ್ 2024, 12:35 IST
Last Updated 1 ಮಾರ್ಚ್ 2024, 12:35 IST
<div class="paragraphs"><p>ಪ್ರಧಾನಿ ಮೋದಿ </p></div>

ಪ್ರಧಾನಿ ಮೋದಿ

   

ಆರಂಭಾಗ್ (ಪಶ್ಚಿಮ ಬಂಗಾಳ): ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದರು. ಘಟನೆಯಿಂದ ಇಡೀ ದೇಶದ ಜನ ಆಕ್ರೋಶಿತರಾಗಿದ್ದಾರೆ ಎಂದು ಹೇಳಿದರು.

ಹೂಗ್ಲಿ ಜಿಲ್ಲೆಯ ಅರಂಭಾಗ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಸಂದೇಶ್‌ಖಾಲಿ ಘಟನೆ ಬಗ್ಗೆ ಮೌನವಹಿಸಿದ್ದಕ್ಕಾಗಿ ‘ಇಂಡಿಯಾ' ಮೈತ್ರಿಕೂಟದ ವಿರುದ್ಧವೂ ಪ್ರಧಾನಿ ಕಿಡಿಕಾರಿದರು. ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಸಂದೇಶ್‌ಖಾಲಿಯಲ್ಲಿ ಟಿಎಂಸಿ ನಾಯಕರಿಂದ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ನಿಲ್ಲುವುದಕ್ಕಿಂತ ಭ್ರಷ್ಟ ಮತ್ತು ತುಷ್ಟೀಕರಣದ ರಾಜಕೀಯವನ್ನು ಬೆಂಬಲಿಸುವುದು ಮುಖ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಏನಿದು ಸಂದೇಶ್‌ಖಾಲಿ ಪ್ರಕರಣ:

ಸಂದೇಶ್‌ಖಾಲಿ ಪ್ರದೇಶದಲ್ಲಿ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಆತನ ಬೆಂಬಲಿಗರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಗ್ರಾಮಸ್ಥರ ಭೂಮಿ ಕಬಳಿಸಿದ್ದಾರೆ ಎಂಬ ಆರೋಪಗಳಿವೆ. ಅವರ ಬಂಧನಕ್ಕೆ ಆಗ್ರಹಿಸಿ ನಡೆದಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ಈ ವಿವಾದವು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿತ್ತು.

ಆರೋಪಿ ಬಂಧನ:

ಕಳೆದ 55 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಶಹಜಹಾನ್ ಶೇಖ್‌ನನ್ನು ಉತ್ತರ 24 ಪರಗಣ ಜಿಲ್ಲೆಯ ಮೀನಾಖಾನ್‌ ಠಾಣೆ ವ್ಯಾಪ್ತಿಯ ಬಾಮನ್‌ ಪುಕುರ್‌ ಎಂಬಲ್ಲಿನ ಮನೆಯೊಂದರಲ್ಲಿ ನಿನ್ನೆ(ಗುರುವಾರ) ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.