ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ಗುರುವಾರ ಸಭೆ ನಡೆಯಿತು
–ಪಿಟಿಐ ಚಿತ್ರ
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ ನಡೆದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಗುರುವಾರ ಉನ್ನತ ಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ದೇಶದ ಭದ್ರತೆ ಮತ್ತು ಕಾರ್ಯಾಚರಣೆಗೆ ಸನ್ನದ್ಧವಾಗಿರುವ ಬದ್ಧತೆಯನ್ನು ಸರ್ಕಾರವು ದೃಢೀಕರಿಸಿದೆ.
‘ನಾಗರಿಕ ಭದ್ರತಾ ವ್ಯವಸ್ಥೆ, ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳ ನಿಗ್ರಹಕ್ಕೆ ಯತ್ನ ಹಾಗೂ ಬಹುಮುಖ್ಯವಾದ ಮೂಲಸೌಕರ್ಯಗಳ ಭದ್ರತೆಯನ್ನು ಖಾತ್ರಿಪಡಿಸುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದ ಅಧಿಕಾರಿಗಳು ಮತ್ತು ಸ್ಥಳೀಯ ಹಂತದ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕು ಎಂದು ಸಚಿವಾಲಯಗಳಿಗೆ ಸೂಚಿಸಲಾಗಿದೆ’ ಎಂದು ಪ್ರಧಾನಿ ಕಾರ್ಯಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸಭೆಯಲ್ಲಿ ರಾಷ್ಟ್ರೀಯ ಸನ್ನದ್ಧ ಸ್ಥಿತಿ ಮತ್ತು ಸಚಿವಾಯಗಳ ಮಧ್ಯೆ ಪರಸ್ಪರ ಸಹಕಾರದ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.
ದೇಶವು ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸಾಂಸ್ಥಿಕ ಸಮನ್ವಯತೆ ಮತ್ತು ಸ್ಪಷ್ಟ ಸಂವಹನದೊಂದಿಗೆ ಎಚ್ಚರಿಕೆಯಿಂದ ಮುಂದುವರಿಯಬೇಕು. ಸಚಿವಾಲಯಗಳ ಮಧ್ಯೆ ನಿರಂತರ ಸಹಕಾರ, ದೈನಂದಿನ ಕಾರ್ಯನಿರ್ವಹಣೆ ಮತ್ತು ಸಾಂಸ್ಥಿಕ ದಕ್ಷತೆಯನ್ನು ಎತ್ತಿಹಿಡಿಯಬೇಕು ಎಂದು ಪ್ರಧಾನಿ ಮೋದಿ ಅವರು ಒತ್ತಿ ಹೇಳಿದ್ದಾರೆ.
ಈ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಧಾನಿ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಮತ್ತು ರಕ್ಷಣೆ ಇಲಾಖೆ, ಗೃಹ ಸಚಿವಾಲಯ, ವಿದೇಶಾಂಗ ವ್ಯವಹಾರಗಳು, ಮಾಹಿತಿ ಮತ್ತು ಪ್ರಸಾರ ಖಾತೆ, ಇಂಧನ, ಆರೋಗ್ಯ ಮತ್ತು ದೂರ ಸಂಪರ್ಕ ಇಲಾಖೆಗಳ ಕಾರ್ಯದರ್ಶಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.