ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವಂತೆ ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮನವಿ ಮಾಡಿದ್ದಾರೆ.
ಇಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಮಿತ್ರಪಕ್ಷಗಳ ಸಮ್ಮುಖದಲ್ಲಿ ರಾಧಾಕೃಷ್ಣನ್ ಅವರನ್ನು ಸನ್ಮಾನಿಸಲಾಯಿತು.
ರಾಧಾಕೃಷ್ಣನ್ ಅವರು ಬುಧವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮೋದಿ ಅವರು ತಮ್ಮ ಭಾಷಣದಲ್ಲಿ ರಾಧಾಕೃಷ್ಣನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವಂತೆ ವಿವಿಧ ಪಕ್ಷಗಳು, ವಿಶೇಷವಾಗಿ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು’ ಎಂದು ಹೇಳಿದ್ದಾರೆ.
‘ರಾಧಾಕೃಷ್ಣನ್ ಅವರು ತಮ್ಮ ರಾಜಕೀಯ ಜೀವನದಲ್ಲಿ ವಿವಾದಗಳಿಂದ ದೂರವಿದ್ದು ಸರಳ ಜೀವನವನ್ನು ನಡೆಸುತ್ತಿದ್ದಾರೆ. ಉಪರಾಷ್ಟ್ರಪತಿಯಾಗಿ ಅವರ ಆಯ್ಕೆ ಇಡೀ ದೇಶಕ್ಕೆ ಸಂತೋಷದ ವಿಷಯವಾಗಲಿದೆ’ ಎಂದು ರಿಜಿಜು ಅಭಿಪ್ರಾಯಪಟ್ಟಿದ್ದಾರೆ.
ಉಪರಾಷ್ಟ್ರಪತಿ ಆಯ್ಕೆಯ ಚುನಾವಣೆಯಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ನಾಮ ನಿರ್ದೇಶನಗೊಂಡ ಸದಸ್ಯರು ಮತದಾನ ಮಾಡಲು ಅವಕಾಶವಿದೆ. ಅದರಂತೆ, ರಾಜ್ಯಸಭೆಯ 233 ಚುನಾಯಿತ ಸದಸ್ಯರು, 12 ನಾಮನಿರ್ದೇಶಿತ ಸದಸ್ಯರು ಹಾಗೂ ಲೋಕಸಭೆಯ 543 ಸಂಸದರು ಮತದಾನ ಮಾಡುವ ಅರ್ಹತೆ ಹೊಂದಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.