ADVERTISEMENT

ಮೋದಿ ಭೇಟಿ ವಿರುದ್ಧ ಪ್ರತಿಭಟನೆ: ಪಂಜಾಬ್‌ ರೈತರ ಮೋದಿ ಗೋಬ್ಯಾಕ್‌ ಅಭಿಯಾನ

ಪಿಟಿಐ
Published 5 ಜನವರಿ 2022, 18:48 IST
Last Updated 5 ಜನವರಿ 2022, 18:48 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಅಮೃತಸರ/ಚಂಡೀಗಡ: ಪಂಜಾಬ್‌ನ ಫಿರೋಜ್‌ಪುರದಲ್ಲಿ ಬಿಜೆಪಿಯ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಭಟನೆ ನಡೆಸಲು, ರಾಜ್ಯದ ಕಿಸನ್ ಮಜ್ದೂರ್ ಸಂಘರ್ಷ ಸಮಿತಿ ಮಂಗಳವಾರ ಕರೆ ನೀಡಿತ್ತು. ಈ ಭಾಗವಾಗಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಟ್ವಿಟರ್‌ ಮತ್ತು ಫೇಸ್‌ಬುಕ್‌ ‘ಮೋದಿಗೋಬ್ಯಾಕ್‌’ ಅಭಿಯಾನ ನಡೆಸಲೂ ಕರೆ ನೀಡಿತ್ತು.

ಅಭಿಯಾನದ ಭಾಗವಾಗಿ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ#GoBackModi ಹ್ಯಾಷ್‌ಟ್ಯಾಗ್‌ನಲ್ಲಿ ಪೋಸ್ಟ್‌ಗಳನ್ನು ಮಾಡಿದರು. ಟ್ವಿಟರ್‌ನಲ್ಲಿ ಸತತ ಹತ್ತು ತಾಸಿನವರೆಗೆ ಈ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ನಲ್ಲಿ ಇತ್ತು. ಈ ಹ್ಯಾಷ್‌ಟ್ಯಾಗ್‌ನಲ್ಲಿ ಬುಧವಾರ ರಾತ್ರಿವರೆಗೆ 2.02 ಲಕ್ಷ ಟ್ವೀಟ್‌ಗಳನ್ನು ಮಾಡಲಾಗಿತ್ತು.

‘ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಜೀಪುಹರಿಸಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಆಶಿಶ್‌ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಜತೆಗೆ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟದ ವೇಳೆ ಮೃತಪಟ್ಟ 700ಕ್ಕೂ ಹೆಚ್ಚು ರೈತರ ಕುಟುಂಬದವರಿಗೆ ಪರಿಹಾರ ಘೋಷಿಸಬೇಕು. ರೈತರು ತನಗಾಗಿ ಜೀವ ಬಿಟ್ಟಿದ್ದಾರೆಯೇ ಎಂದು ಕೇಳಿದ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು’ಎಂದು ಸಮಿತಿಯು ಆಗ್ರಹಿಸಿತ್ತು.

ಈ ಪ್ರತಿಭಟನೆಯ ಭಾಗವಾಗಿ ಫಿರೋಜ್‌ಪುರ ರ‍್ಯಾಲಿಗೆ ಬರಲಿರುವ ಬಿಜೆಪಿ ಕಾರ್ಯಕರ್ತರ ಬಸ್‌ಗಳನ್ನು ಪ್ರತಿಭಟನಕಾರರು ತಡೆದು ನಿಲ್ಲಿಸಿದರು.

***

ರ‍್ಯಾಲಿಯಲ್ಲಿ ಭಾಗಿಯಾಗಲು ಬಿಜೆಪಿ ಕಾರ್ಯಕರ್ತರು ಬರುತ್ತಿದ್ದ ಬಸ್‌ಗಳನ್ನು ಪಂಜಾಬ್‌ ಪೊಲೀಸರು ತಡೆದಿದ್ದಾರೆ. ಹೀಗಾಗಿ ಜನ ಬಂದಿಲ್ಲ.

- ಅಶ್ವಿನಿ ಶರ್ಮಾ, ಪಂಜಾಬ್‌ ಬಿಜೆಪಿ ಅಧ್ಯಕ್ಷ

ರ‍್ಯಾಲಿಯಲ್ಲಿ ಜನ ಸೇರಿಲ್ಲ ಎಂಬುದು ಮೋದಿಗೆ ಗೊತ್ತಿತ್ತು. ರಸ್ತೆ ತಡೆ ತೆರವು ಮಾಡಲು ತಡವಾದದ್ದನ್ನೇ ನೆಪ ಮಾಡಿಕೊಂಡು ರ‍್ಯಾಲಿ ರದ್ದುಪಡಿಸಿದರು.

- ರಣದೀಪ್‌ ಸಿಂಗ್ ಸುರ್ಜೇವಾಲಾ ಕಾಂಗ್ರೆಸ್‌ ಮುಖ್ಯ ವಕ್ತಾರ

ಭದ್ರತಾ ಲೋಪದ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು. ಪಂಜಾಬ್ ಸರ್ಕಾರಕ್ಕೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ. ಆ ಸರ್ಕಾರವನ್ನು ಬರ್ಖಾಸ್ತ್ ಮಾಡಬೇಕು

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.