ADVERTISEMENT

ಹೈದರಾಬಾದ್‌ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಪಿಟಿಐ
Published 15 ಜನವರಿ 2023, 6:54 IST
Last Updated 15 ಜನವರಿ 2023, 6:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ಬಂದರು ನಗರವಾದ ವಿಶಾಖಪಟ್ಟಣ ನಡುವಿನ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.

‘ವಂದೇ ಭಾರತ್‌, ದೇಶದ ನಿಜವಾದ ಪ್ರತಿರೂಪವಾಗಿದೆ. ಅವಲಂಬನೆಯ ಮನಸ್ಥಿತಿಯಿಂದ ಹೊರಬಂದು ಸ್ವಾವಲಂಬನೆ ಕಡೆಗೆ ಚಲಿಸುತ್ತಿರುವುದರ ಸಂಕೇತವಾಗಿದೆ’ ಎಂದು ಪ್ರಧಾನಿ ಹೇಳಿದರು.

ಎರಡು ತೆಲುಗು ರಾಜ್ಯಗಳ ನಡುವೆ ಕಾರ್ಯನಿರ್ವಹಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಸಿಕಂದರಾಬಾದ್‌ನಿಂದ ವಿಶಾಖಪಟ್ಟಣವನ್ನು ಎಂಟು ಗಂಟೆ 30 ನಿಮಿಷಗಳಲ್ಲಿ ತಲುಪುತ್ತದೆ.

ADVERTISEMENT

ಸೇನಾ ದಿನಾಚರಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿದ ಸೈನಿಕರಿಗೆ ಪ್ರಧಾನಮಂತ್ರಿಯವರು ಗೌರವ ಸಲ್ಲಿಸಿದರು ಮತ್ತು ದೇಶ ಮತ್ತು ಗಡಿಗಳನ್ನು ರಕ್ಷಿಸುವಲ್ಲಿ ಸೈನಿಕರ ಬದ್ಧತೆಯನ್ನು ಶ್ಲಾಘಿಸಿ, ಅವರ ಶೌರ್ಯಕ್ಕೆ ಸಾಟಿಯಿಲ್ಲ ಎಂದರು.

ವಂದೇ ಭಾರತ್ ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಂಸ್ಕೃತಿಗಳನ್ನು ಸಂಪರ್ಕಿಸುತ್ತದೆ ಎಂದು ಮೋದಿ ತಮ್ಮ ವರ್ಚುವಲ್ ಭಾಷಣದಲ್ಲಿ ಹೇಳಿದರು. ರೈಲಿನ ನಿಯಮಿತ ಸೇವೆಗಳು ಜನವರಿ 16 ರಿಂದ ಪ್ರಾರಂಭವಾಗಲಿದ್ದು, ಬುಕಿಂಗ್ ಶನಿವಾರದಿಂದ ಪ್ರಾರಂಭವಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಉದ್ಘಾಟನೆಯ ವೇಳೆ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ, ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.