ADVERTISEMENT

ಎನ್‌ಇಪಿಯಲ್ಲಿ ಗಾಂಧೀಜಿ ಆದರ್ಶ ಅಳವಡಿಕೆ: ಅಮಿತ್ ಶಾ ಅಭಿಮತ

ಪಿಟಿಐ
Published 12 ಮಾರ್ಚ್ 2022, 10:36 IST
Last Updated 12 ಮಾರ್ಚ್ 2022, 10:36 IST
ಅಮಿತ್ ಶಾ
ಅಮಿತ್ ಶಾ   

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ಅಹಮದಾಬಾದ್‌ನ ಪಾಲ್ಡಿ ಪ್ರದೇಶದ ಕೋಚ್ರಬ್ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ 92ನೇ ವಾರ್ಷಿಕೋತ್ಸವವನ್ನು ಆಚರಿಸಲು ದಕ್ಷಿಣ ಗುಜರಾತ್‌ನ ದಂಡಿಯವರೆಗೆ ಸೈಕಲ್ ರ್‍ಯಾಲಿಯನ್ನು ಅಮಿತ್ ಶಾ ಉದ್ಘಾಟಿಸಿದರು.

ದಂಡಿ ಯಾತ್ರೆಯ ಮಾರ್ಗದಲ್ಲಿ ಸಂಚರಿಸಲಿರುವ 12 ಸೈಕಲ್ ಯಾತ್ರಿಕರು ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ಸಾರಲಿದ್ದಾರೆ.

'ಗಾಂಧೀಜಿ ತೋರಿಸಿದ ಹಾದಿಯಿಂದ ವಿಮುಖರಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಹೊಸ ಶಿಕ್ಷಣ ನೀತಿಯಲ್ಲಿ ಗಾಂಧಿಯವರ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ. ಮಾತೃಭಾಷೆ, ರಾಷ್ಟ್ರೀಯ ಭಾಷೆಗಳು ಮತ್ತು ಉದ್ಯೋಗ ಆಧರಿತ ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ. ಈ ಎಲ್ಲ ಗಾಂಧಿ ತತ್ವಗಳನ್ನು ಶಿಕ್ಷಣ ನೀತಿಯೊಂದಿಗೆ ಜೋಡಣೆ ಮಾಡಲಾಗಿದೆ' ಎಂದು ಹೇಳಿದ್ದಾರೆ.

ADVERTISEMENT

ಕೋಚ್ರಬ್ ಆಶ್ರಮವು ಮಹಾತ್ಮ ಗಾಂಧಿ, ದೇಶದಲ್ಲಿ ಸ್ಥಾಪಿಸಿದ ಮೊದಲ ಆಶ್ರಮವಾಗಿದೆ. 1915ರಲ್ಲಿ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಇದನ್ನು ಸ್ಥಾಪಿಸಲಾಯಿತು.

'ಸ್ವಚ್ಛ ಭಾರತ ಅಭಿಯಾನ, ಪ್ರತಿ ಮನೆಗೂ ಶೌಚಾಲಯ, ನೀರು, ವಿದ್ಯುತ್ ಸಂಪರ್ಕ, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳನ್ನು ಅಧ್ಯಯನ ಮಾಡಿದರೆ ಗಾಂಧಿ ಚಿಂತನೆಗಳ ಪ್ರತಿಬಿಂಬವು ಗೋಚರಿಸುತ್ತದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.