ADVERTISEMENT

ಭಾರತ–ಇಸ್ರೇಲ್‌: ವ್ಯಾಪಾರ, ಕೃಷಿ, ಡಿಜಿಟಲ್‌ ಪಾವತಿ ಸೇರಿ ಹಲವು ಒಪ್ಪಂದಕ್ಕೆ ಸಹಿ

ಪಿಟಿಐ
Published 27 ಫೆಬ್ರುವರಿ 2026, 0:55 IST
Last Updated 27 ಫೆಬ್ರುವರಿ 2026, 0:55 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು   </p></div>

ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು

   

–ಪಿಟಿಐ ಚಿತ್ರ 

ಜೆರುಸಲೇಂ: ಇಸ್ರೇಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಜತೆ ವಿವಿಧ ಮಹತ್ವದ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದರು. 

ADVERTISEMENT

ಈ ವೇಳೆ ವ್ಯಾಪಾರ, ಕೃಷಿ, ಸೈಬರ್‌ಸ್ಪೇಸ್‌, ಡಿಜಿಟಲ್‌ ಪಾವತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಸಹಕಾರ ವೃದ್ಧಿಸಲು ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳು ಏರ್ಪಟ್ಟವು. ಉಭಯ ದೇಶಗಳ ನಡುವೆ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ವೃದ್ಧಿಸುವ ಕುರಿತು ಬದ್ಧತೆ ತೋರಿದವು.

ಭಾರತ– ಇಸ್ರೇಲ್‌ಗೆ ಪರಸ್ಪರ ಉಪಯುಕ್ತವಾಗುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲಿಯೇ ಅಂತಿಮ ರೂಪ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಹೇಳಿದರು.

ಗಾಜಾಪಟ್ಟಿಯಲ್ಲಿ ಶಾಂತಿ ಸ್ಥಾಪನೆಯಾಬೇಕು ಎನ್ನುವುದನ್ನು ಬಲವಾಗಿ ಪ್ರತಿಪಾದಿಸಿದ ಮೋದಿ ಅವರು, ಮಾನವೀಯತೆಯು ಎಂದಿಗೂ ಸಂಘರ್ಷದ ಬಲಿಪಶುವಾಗಬಾರದು ಎಂದರು.

ಭಾರತವು ಭವಿಷ್ಯದಲ್ಲೂ ಎಲ್ಲ ದೇಶಗಳ ಜತೆ ಸಂವಾದ, ಸಹಕಾರವನ್ನು ಮುಂದುವರಿಸುತ್ತದೆ ಎಂದು ಪ್ರತಿಪಾದಿಸಿದರು.

ತಂತ್ರಜ್ಞಾನಗಳ ವರ್ಗಾವಣೆ ಚೌಕಟ್ಟಿನಡಿ ಜಂಟಿ ಅಭಿವೃದ್ಧಿ ಮತ್ತು ಸೇನಾ ಹಾರ್ಡ್‌ವೇರ್‌ನ ಜಂಟಿ ಉತ್ಪಾದನೆಗೆ ಒತ್ತು ನೀಡಲಾಗುವುದು. ಈ ಮೂಲಕ ಎರಡೂ ದೇಶಗಳ ನಡುವಿನ ನಿಕಟ ರಕ್ಷಣಾ ಪಾಲುದಾರಿಕೆಯನ್ನು ವಿಸ್ತರಿಸಲಾಗುವುದು ಎಂದರು. 

ಕೃತಕ ಬುದ್ಧಿಮತ್ತೆ, ಕ್ವಾಂಟಮ್‌ ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಹೊಸ ವೇಗ ನೀಡಲು ಉಭಯ ದೇಶಗಳು ಸಮ್ಮತಿಸಿವೆ. ಇದಕ್ಕಾಗಿ ಉಭಯ ದೇಶಗಳ ನಡುವೆ ಅತ್ಯಾಧುನಿಕ ತಂತ್ರಜ್ಞಾನಗಳ ಪಾಲುದಾರಿಕೆಯನ್ನು ಸ್ಥಾಪಿಸಲಾಗುವುದು ಎಂದು ಮೋದಿ ಘೋಷಿಸಿದರು. ಇಸ್ರೇಲ್‌ನಲ್ಲಿ ಯುಪಿಐ ಬಳಕೆ ಕುರಿತು ಒಪ್ಪಂದ ಮಾಡಿಕೊಂಡಿರುವುದು ಸಂತಸವಾಗಿದೆ ಎಂದು ಅವರು ಹೇಳಿದರು.   

ಭಯೋತ್ಪಾದನೆಗೆ ಸ್ಥಳವಿಲ್ಲ:

‘ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಳವಿಲ್ಲ’ ಎಂಬುದು ಭಾರತ ಮತ್ತು ಇಸ್ರೇಲ್‌ನ ದೃಷ್ಟಿಕೋನವಾಗಿದೆ. ಭಯೋತ್ಪಾದನೆ ಮತ್ತು ಅದರ ಬೆಂಬಲಿಗರನ್ನು ಎದುರಿಸುವಲ್ಲಿ ಎರಡೂ ದೇಶಗಳು ಹೆಗಲಿಗೆ ಹೆಗಲು ಕೊಟ್ಟು ಕಾರ್ಯ ನಿರ್ವಹಸಲಿವೆ ಎಂದು ಮೋದಿ ತಿಳಿಸಿದರು. 

ಭಾರತ–ಪಶ್ಚಿಮ ಏಷ್ಯಾ ಯುರೋಪ್‌ ಆರ್ಥಿಕ ಕಾರಿಡಾರ್‌ (ಐಎಂಇಸಿ) ಅನುಷ್ಠಾನ, ಭಾರತ–ಇಸ್ರೇಲ್‌–ಯುಎಇ–ಅಮೆರಿಕ ನಡುವಿನ ಸಹಕಾರ ವೃದ್ದಿಯ ಕುರಿತೂ ಚರ್ಚೆ ನಡೆದಿವೆ ಎಂದು ಮೂಲಗಳು ತಿಳಿಸಿವೆ. 

ಮೋದಿ ಸ್ನೇಹಿತನಿಗಿಂತ ಹೆಚ್ಚು: ನೆತನ್ಯಾಹು

ಜೆರುಸಲೇಂ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸ್ನೇಹಿತನಿಗಿಂತ ಹೆಚ್ಚು’ ಎಂದು ಬಣ್ಣಿಸಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು 2023ರ ಅಕ್ಟೋಬರ್‌ 7ರಂದು ಹಮಾಸ್‌ ನಡೆಸಿದ ಭೀಕರ ದಾಳಿಯ ಬಳಿಕ ಇಸ್ರೇಲ್‌ ಪರವಾಗಿ ನಿಂತಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಹಮಾಸ್‌ ನಡೆಸಿದ ಮಾರಕ ದಾಳಿಯನ್ನು ಆರಂಭದಲ್ಲಿಯೇ ಖಂಡಿಸಿದ ವಿಶ್ವದ ನಾಯಕರಲ್ಲಿ ಮೋದಿ ಕೂಡ ಒಬ್ಬರು. ಈ ದಾಳಿಯಲ್ಲಿ 1200 ಇಸ್ರೇಲಿಗಳು ಮೃತಪಟ್ಟಿದ್ದರೆ ಸುಮಾರು 250 ಮಂದಿಯನ್ನು ಅಪಹರಿಸಲಾಗಿತ್ತು.   ‘ನನ್ನ ಪ್ರೀತಿಯ ಸ್ನೇಹಿತ ನರೇಂದ್ರ ಅವರ ಭೇಟಿಯಿಂದ ನಾನು ಭಾವುಕನಾಗಿದ್ದೇನೆ. ನೀವು ಇಸ್ರೇಲ್‌ನ ಉತ್ತಮ ಸ್ನೇಹಿತ. ಜಾಗತಿಕ ವೇದಿಕೆಯಲ್ಲಿ ಉತ್ತಮ ನಾಯಕ. ನೀವು ನನಗೆ ಸ್ನೇಹಿತನಿಗಿಂತಲೂ ಹೆಚ್ಚು ಒಬ್ಬ ಸಹೋದರ’ ಎಂದು ನೆತನ್ಯಾಹು ಹೇಳಿದರು.  ‘ಭಾರತ ಒಂದು ದೈತ್ಯ ದೇಶ ಅಗಾಧ ಶಕ್ತಿ ಹೊಂದಿದೆ. ಅದು ತನ್ನ ಶಕ್ತಿಯೊಂದಿಗೆ ಇಸ್ರೇಲ್‌ಗೆ ಬೆಂಬಲ ನೀಡಿದೆ’ ಎಂದರು. ‘ಭಾರತವು ಬಾಹ್ಯಾಕಾಶದ ಸೂಪರ್‌ ಪವರ್‌ ದೇಶವಾಗಿದ್ದು ಏಷ್ಯಾದ ಹುಲಿಯಾಗಿದೆ’ ಎಂದು ಅವರು ಶ್ಲಾಘಿಸಿದರು

ಇಸ್ರೇಲ್‌ ಅಧ್ಯಕ್ಷರಿಗೆ ಭಾರತದ ಆಹ್ವಾನ

ಇಸ್ರೇಲ್‌ ಅಧ್ಯಕ್ಷ ಐಸ್ಯಾಕ್‌ ಹೆರ್ಜೊಗ್‌ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರನ್ನು ಭಾರತಕ್ಕೆ ಆಹ್ವಾನಿಸಿದರು.  ‘ಭಾರತಕ್ಕೆ ಭೇಟಿ ನೀಡುವಂತೆ ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ನಿಮ್ಮ ಭೇಟಿಯನ್ನು ದೆಹಲಿಗೆ ಸೀಮಿತಗೊಳಿಸದೇ ಭಾರತದ ಇತರ ಭಾಗಗಳಲ್ಲೂ ಪ್ರಯಾಣಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಿ’ ಎಂದು ಮೋದಿ ಹೇಳಿದರು.  ಉಭಯ ದೇಶಗಳ ನಡುವೆ ಶಿಕ್ಷಣ ನವೋದ್ಯಮ ತಂತ್ರಜ್ಞಾನ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸುವ ಕುರಿತು ಇಬ್ಬರೂ ನಾಯಕರು ಈ ವೇಳೆ ಚರ್ಚಿಸಿದರು.  ಸಂಘರ್ಷದ ಸಂದರ್ಭದಲ್ಲಿ ಇಸ್ರೇಲ್‌ಗೆ ಬೆಂಬಲ ನೀಡಿದ್ದಕ್ಕಾಗಿ ಹೆರ್ಜೊಗ್‌ ಅವರು ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಅಧ್ಯಕ್ಷರ ಉದ್ಯಾನದಲ್ಲಿ ಭಾರತದ ಪ್ರಧಾನಿ ಸಸಿ ನೆಟ್ಟರು. –––

ಇಸ್ರೇಲ್‌ ಕಂಪನಿಗಳಿಗೆ ಆಹ್ವಾನ‌: 

ಭಾರತದಲ್ಲಿ ಹೂಡಿಕೆ ಮಾಡಿ ದೇಶದ ಪ್ರತಿಭಾವಂತ ಯುವ ಜನರೊಂದಿಗೆ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ನ ತಂತ್ರಜ್ಞಾನ ಕಂಪನಿಗಳಿಗೆ ಆಹ್ವಾನ ನೀಡಿದರು. ಕೃತಕ ಬುದ್ಧಿಮತ್ತೆ ಆರೋಗ್ಯ ರಕ್ಷಣೆ ಕೃಷಿ ಕ್ಷೇತ್ರಗಳಲ್ಲಿನ ನಾವೀನ್ಯ ತಂತ್ರಜ್ಞಾನಗಳ ಪ್ರದರ್ಶನಕ್ಕೆ ನೆತನ್ಯಾಹು ಜತೆಗೆ ಭೇಟಿ ನೀಡಿದ್ದ ಮೋದಿ ಅವರು ‘ತಂತ್ರಜ್ಞಾನ ಪ್ರಪಂಚದ ವಿಶೇಷ ನಾವೀನ್ಯತೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.