ನರೇಂದ್ರ ಮೋದಿ
–ಪಿಟಿಐ ಚಿತ್ರ
ನವದೆಹಲಿ: ತಾನು ನಡೆಸಿರುವ ದಾಳಿಯಿಂದಾಗಿ ಆದಂಪುರ ವಾಯುನೆಲೆಗೆ ಹಾನಿಯಾಗಿದೆ ಎಂದು ಪಾಕಿಸ್ತಾನ ‘ಸುಳ್ಳು’ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಪ್ರಮುಖ ವಾಯುನೆಲೆಗೆ ಮಂಗಳವಾರ ಭೇಟಿ ನೀಡಿ ನೆರೆ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು. ‘ಶತ್ರುಗಳು ದಾಳಿ ನಡೆಸಿದರೆ ಅವರನ್ನು ಧೂಳೀಪಟ ಮಾಡಲು ಭಾರತ ಯಾವಾಗಲೂ ಸಿದ್ಧವಿದೆ’ ಎಂದು ಮೋದಿ ಪ್ರತಿಪಾದಿಸಿದರು.
‘ಸಿಂಧೂರ’ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನವು ಇದೇ 7ರಿಂದ 10ರವರೆಗೆ ನಡೆಸಿದ್ದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳಿಂದ ಸೇನಾ ನೆಲೆಗಳು ಹಾಗೂ ವಾಯುಪಡೆ ನೆಲೆಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದ ಎಸ್ -400 ವಾಯು ರಕ್ಷಣಾ ವ್ಯವಸ್ಥೆಯ ಮುಂದೆ ನಿಂತಿದ್ದ ಸಶಸ್ತ್ರ ಪಡೆ ಸಿಬ್ಬಂದಿಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
ಆದಂಪುರ ವಾಯುನೆಲೆಯಲ್ಲಿ ಪ್ರಧಾನಿ ಭಾಷಣ ಮಾಡಿರುವ ಚಿತ್ರಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಚಿತ್ರದ ಹಿನ್ನೆಲೆಯಲ್ಲಿ ‘ಎಸ್ -400 ವಾಯು ರಕ್ಷಣಾ ವ್ಯವಸ್ಥೆ’ ಇದೆ. ಈ ಮೂಲಕ, ವಾಯುನೆಲೆ ಮತ್ತು ರಷ್ಯಾ ಮೂಲದ ವಾಯು ರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸಲಾಗಿದೆ ಎಂಬ ಪಾಕಿಸ್ತಾನದ ಸುಳ್ಳು ಹೇಳಿಕೆಗಳನ್ನು ನಿರಾಕರಿಸುವ ಪ್ರಯತ್ನವನ್ನು ಭಾರತ ಮಾಡಿದೆ.
‘ಆಪರೇಷನ್ ಸಿಂಧೂರ’ ನಂತರ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ, ಒಂಬತ್ತು ಭಯೋತ್ಪಾದಕ ತಾಣಗಳ ನಾಶ ಮತ್ತು ಪಾಕಿಸ್ತಾನದ ಎಂಟು ಸೇನಾ ನೆಲೆಗಳಿಗೆ ಹಾನಿಯನ್ನುಂಟುಮಾಡಿದ ಸೇನೆಯನ್ನು ಮೋದಿ ಶ್ಲಾಘಿಸಿದರು. ‘ನಿಮ್ಮ ಸಾಧನೆ ಅಭೂತಪೂರ್ವ, ಊಹಿಸಲಾಗದ್ದು ಹಾಗೂ ಅದ್ಭುತ’ ಎಂದು ಅವರು ಬಣ್ಣಿಸಿದರು.
ಮಿಗ್ 29 ಯುದ್ಧ ವಿಮಾನಗಳನ್ನು ಹೊಂದಿರುವ ಆದಂಪುರ ನೆಲೆಯು ದೇಶದ ಎರಡನೇ ಅತಿದೊಡ್ಡ ವಾಯುನೆಲೆಯಾಗಿದೆ ಹಾಗೂ ಪಾಕಿಸ್ತಾನ ಗಡಿಯಿಂದ 100 ಕಿ.ಮೀ. ದೂರದಲ್ಲಿದೆ.
‘ಭಯೋತ್ಪಾದನೆಯ ವಿರುದ್ಧ ಭಾರತದ ‘ಲಕ್ಷ್ಮಣ ರೇಖೆ’ ಈಗ ಸ್ಪಷ್ಟವಾಗಿದೆ. ಈಗ ಮತ್ತೊಂದು ಭಯೋತ್ಪಾದಕ ದಾಳಿ ನಡೆದರೆ, ಭಾರತವು ತಕ್ಕ ಪ್ರತ್ಯುತ್ತರ ನೀಡುತ್ತದೆ. ಭಾರತ ಯಾವುದೇ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ. ಭಯೋತ್ಪಾದನೆ ಬೆಂಬಲಿಸುವ ಸರ್ಕಾರ ಮತ್ತು ಭಯೋತ್ಪಾದನೆಯ ಸಂಚುಕೋರರನ್ನು ನಾವು ಪ್ರತ್ಯೇಕ ಪ್ರತ್ಯೇಕವಾಗಿ ನೋಡುವುದಿಲ್ಲ’ ಎಂದು ಅವರು ಪುನರುಚ್ಚರಿಸಿದರು.
‘ಪಾಕಿಸ್ತಾನದ ಮನವಿಯ ನಂತರ, ಭಾರತ ತನ್ನ ಸೇನಾ ಕಾರ್ಯಾಚರಣೆ ನಿಲ್ಲಿಸಿದೆ. ಪಾಕಿಸ್ತಾನ ಮತ್ತೆ ಭಯೋತ್ಪಾದಕ ಚಟುವಟಿಕೆಗಳನ್ನು ಅಥವಾ ಸೇನಾ ಕಾರ್ಯಾಚರಣೆ ನಡೆಸುವ ದುಸ್ಸಾಹಸ ತೋರಿಸಿದರೆ, ನಾವು ಸೂಕ್ತ ಉತ್ತರ ನೀಡುತ್ತೇವೆ. ನಾವು ನಮ್ಮದೇ ಆದ ರೀತಿಯಲ್ಲಿ ಈ ಉತ್ತರ ನೀಡುತ್ತೇವೆ’ ಎಂದು ಅವರು ಎಚ್ಚರಿಸಿದರು.
‘ಈ ಕಾರ್ಯಾಚರಣೆಯ ಮೂಲಕ ಭಾರತ್ ಮಾತಾ ಕಿ ಜೈ ಘೋಷಣೆಯ ತಾಕತ್ತನ್ನು ಇಡೀ ಜಗತ್ತು ನೋಡಿದೆ. ಇದು ಕೇವಲ ಘೋಷಣೆ ಅಲ್ಲ. ಬದಲಾಗಿ, ನಮ್ಮ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವುದಕ್ಕಾಗಿ ಮಾಡಿರುವ ಪ್ರತಿಜ್ಞೆ. ನಿಮ್ಮ ಶೌರ್ಯದ ಕಥೆಗಳು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ’ ಎಂದು ಅವರು ಹೇಳಿದರು.
‘ಶತ್ರುಗಳು ಈ ವಾಯುನೆಲೆ ಮತ್ತು ಇತರ ಹಲವಾರು ವಾಯುನೆಲೆಗಳ ಮೇಲೆ ದಾಳಿ ಮಾಡಲು ಹಲವು ಬಾರಿ ಪ್ರಯತ್ನಿಸಿದರು. ಆದರೆ, ಪಾಕಿಸ್ತಾನದ ದುಷ್ಟ ಯೋಜನೆಗಳು ಪ್ರತಿ ಬಾರಿಯೂ ವಿಫಲವಾದವು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.